ಸುಳ್ಯ, ಆ 19 : ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಆ. ೧೮ ರ ಶನಿವಾರ ಬಂಧಿಸಿದ್ದಾರೆ. ಸುಳ್ಯ ಕಸಬಾ ಗ್ರಾಮದ ಬಸ್ಮಡ್ಕ ನಿವಾಸಿ ತೀರ್ಥಪ್ರಸಾದ್(25) ಹಾಗೂ ಪುತ್ತೂರು ತಾಲೂಕು ಚಿಕ್ಕಮುಡ್ನೂರ್ ಗ್ರಾಮದ ತಾರಿಗುಡ್ಡೆ ನಿವಾಸಿ ವಿನಾಯಕ (30)ಬಂಧಿತರು.
ಸುಳ್ಯ ಪೇಟೆಯಲ್ಲಿ ಬೈಕ್ ಹಾಗೂ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ವಿವೇಕಾನಂದ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಪೊಲೀಸರನ್ನು ಕಂಡು ಇಬ್ಬರು ಆರೋಪಿಗಳು ಓಡಲು ಆರಂಭಿಸಿದರು. ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಅವರ ಬಳಿ 1.394 ಕಿ. ಗ್ರಾಂ ಗಾಂಜಾ ಪತ್ತೆಯಾಗಿದೆ. ಆರೋಪಿಗಳಿಂದ ಒಟ್ಟು 2,42,190 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಬಂಧಿತ ತೀರ್ಥ ಪ್ರಸಾದ್ ಎಂಬಾತನ ಮೇಲೆ ಸುಳ್ಯ ಠಾಣೆಯಲ್ಲಿ 2 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ವಿನಾಯಕ್ ಎಂಬಾತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ 1 ಗಾಂಜಾ ಪ್ರಕರಣ ದಾಖಲಾಗಿದೆ. ಈ ಇಬ್ಬರು ಗಾಂಜಾ ಪ್ರಕರಣದ ಹಳೇ ಆರೋಪಿಗಳಾಗಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬಿ.ಆರ್ ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಅವರ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್ ರವರ ನೇತೃತ್ವದಲ್ಲಿ ಸಿಬ್ಬಂದಿ ಲಕ್ಷ್ಮಣ ಕೆ.ಜಿ ನಾರಾಯಣ, ಉದಯ್ ಗೌಡ , ಪ್ರವೀಣ್ ಎಂ, ತಾರಾನಾಥ್ ಎಸ್ ರೈ, ಶೋನ್ ಶಾ ಮತ್ತು ಸುರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.