ಬೆಳ್ತಂಗಡಿ, ಆ 19: ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರಕಾರ ವರದಿಯನ್ನು ಸಮಯಕ್ಕೆ ಸರಿಯಾಗಿ ಒಪ್ಪಿಸಲೇಬೇಕಾಗುತ್ತದೆ. ರಾಜ್ಯ ಸರಕಾರದ ಉದಾಸೀನತೆಯಿಂದಾಗಿ ಕೃಷಿಕರು ಒತ್ತಡದಲ್ಲಿರಬೇಕಾದ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿಯ ನಿರೀಕ್ಷಣಾ ಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ, ಕಸ್ತೂರಿ ರಂಗನ್ ಯೋಜನೆಯ ಬಗ್ಗೆ ಯಾರು ಆತಂಕ ಪಡಬೇಕಾದ ಅಗತ್ಯವಿಲ್ಲ. ಕೇಂದ್ರ ಸರಕಾರ ನಿಮ್ಮ ಜೊತೆಗಿದೆ. ಹಿಂದೆ ನಡೆದ ಏರಿಯಲ್ ಸರ್ವೇಯಿಂದಾಗಿ ಎಲ್ಲಾ ಇಲ್ಲಿ ತೆಂಗು, ಕಂಗು, ರಬ್ಬರ್ ಗಿಡಗಳಿಂದಾಗಿ ಕಾಡೇ ಕಂಡಿದೆ. ಹೀಗಾಗಿ ಸಮಸ್ಯೆಯುಂಟಾಗಿರುವುದನ್ನು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಲಾಗಿದೆ. ಅವರು ನಮ್ಮ ಪರವಾಗಿದ್ದಾರೆ. ಕೃಷಿಗೆ ತೊಂದರೆ ಆಗಬಾರದು ಎಂಬುದು ಅವರ ಮನಸ್ಸಿನಲ್ಲಿದೆ ಎಂದು ಡಿವಿ ವಿವರಿಸಿದರು.
ರಾಜ್ಯದ ತಪ್ಪಿಗೆ ಕರಾವಳಿ ಬಲಿ ಕೊಡಲು ಬಿಡುವುದಿಲ್ಲ. ಯಾವುದೇ ಸಂಶಯ ಬೇಡ. ಈ ಬಗ್ಗೆ ಇಲ್ಲಿನ ಶಾಸಕ ಹರೀಶ್ ಪೂಂಜ ಸಭೆ ಮಾಡಿರುವುದು ಉತ್ತಮ ಕೆಲಸ. ಇದಕ್ಕೆ ಸಂಬಂಧಪಟ್ಟಂತೆ ನಿಯೋಗ ದಿಲ್ಲಿಗೆ ಬಂದಾಗ ಸವಿವರವಾಗಿ ಚರ್ಚಿಸೋಣ. ಕೇಂದ್ರದಲ್ಲಿರುವ ಹಸಿರು ಪೀಠದ ನಿಯಮಗಳು ಬಲವಾಗಿದ್ದರೂ ನಾವು ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಹೀಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದು ಅವಶ್ಯವಿಲ್ಲ. ಯಾವುದಕ್ಕೂ ಕೇಂದ್ರ ಸರಕಾರ ನಿಮ್ಮ ಜೊತೆಗಿದೆ ಎಂದರು. ಸಚಿವರೊಂದಿಗೆ ಸಂಸದ ನಳೀನ್ ಕುಮಾರ್ ಕಟೀಲು ಶಾಸಕ ಹರೀಶ್ ಪೂಂಜ, ಬಿಜೆಪಿಯ ವಿವಿಧ ಪದಾಧಿಕಾರಿಗಳು ಇದ್ದರು.
ಬಳಿಕ ಅವರು, ಹಾನಿಗೊಳಗಾದ ಮೇಲಂತಬೆಟ್ಟಿನ ಕವಿತಾ ಹಾಗು ಸ್ವರ್ಣಲತಾ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ರು. ಬಳಿಕ ಇಂದಬೆಟ್ಟಿನಿಂದ ಕಡಿರುದ್ಯಾವರದ ಸಂಪರ್ಕ ರಸ್ತೆಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.