ಮಂಗಳೂರು, ಆ 20: ನಗರದ ನೆಹರೂ ಮೈದಾನ ಸಮೀಪ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ ಸ್ಟೇಬಲ್ ಶ್ರೀನಿವಾಸ್ ಅವರ ಮೊಬೈಲ್ ಹಾಗೂ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಕಳ್ಳರನ್ನು ಪಾಂಡೇಶ್ವರ ಪೊಲೀಸರು ಮತ್ತು ದಕ್ಷಿಣ ರೌಡಿ ನಿಗ್ರಹದಳ ಸಿಬ್ಬಂದಿ ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಯತೀಸ್ ಎಂ.ಎಸ್ ಯಾನೆ ಯತಿ, ಮತ್ತು ಮಹಮ್ಮದ್ ಅಶ್ರಫ್ ಯಾನೆ ಅಜ್ಜು, ಹಾಗೂ ಬಂಟ್ವಾಳ ತಾಲೂಕು ಸರಪಾಡಿ ಅಜಿಲಮೊಗರಿನ ಅಶ್ರಫ್ ಯಾನೆ ನಿಜಾಮ್ ಬಂಧಿತ ಆರೋಪಿಗಳು. 3 ತಿಂಗಳ ಹಿಂದೆ ಕಾನ್ ಸ್ಟೇಬಲ್ ಶ್ರೀನಿವಾಸ್ ಅವರು ನಗರದ ನೆಹರೂ ಮೈದಾನದ ಒಳಭಾಗದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ, ಮೂವರು ಅಪರಿಚಿತರು ಏಕಾಏಕಿ ಅಡ್ಡಗಟ್ಟಿ ಅವರ ಬಳಿಯಿದ್ದ ಮೊಬೈಲ್ ಫೋನ್, ಪರ್ಸ್ ನಲ್ಲಿದ್ದ 450 ರೂ, ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ,ಯತೀಶ್ ಎಂ.ಎಸ್ ಕುಖ್ಯಾತ ಕಳ್ಳನಾಗಿದ್ದು, ಆತ ತನ್ನ ಸಹಚರನಾದ ರವಿ ಯಾನೆ ಶಂಕರಲಿಂಗೇಗೌಡನ ಜತೆ ಸೇರಿಕೊಂಡು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ನೆಹರೂ ಮೈದಾನದ ಆಸುಪಾಸಿನಲ್ಲಿ ಠಿಕಾಣಿ ಹೂಡುವವರಾಗಿದ್ದು ಕದ್ದಿದ್ದ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.