ಮಂಗಳೂರು, ಆ 20: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಹಾಗೂ ನಿರಂತರವಾಗಿ ಆಗುತ್ತಿರುವ ಭೂ ಕುಸಿತದಿಂದಾಗಿ ಬೆಂಗಳೂರು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಗಳು ಹಾಗೂ ರೈಲೆ ಸಂಚಾರ ಸ್ಥಗಿತಗೊಂಡಿದ್ದು, ತುರ್ತು ಕಾರ್ಯ ನಿಮಿತ್ತ, ಬೆಂಗಳೂರು ಕಡೆಗೆ ಪ್ರಯಾಣಿಸಬೇಕಾದವರು, ವಿಮಾನದ ಮೊರೆಹೋಗುವುದು ಅನಿವಾರ್ಯವಾಗಿದೆ. ಇದರ ಲಾಭ ಪಡೆಯಲು ಹವಣಿಸುತ್ತಿರುವ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಐದು ಪಟ್ಟು ಹೆಚ್ಚಿನ ದರವನ್ನು ಆನ್ ಲೈನ್ ನಲ್ಲಿ ತೋರಿಸುತ್ತಿವೆ. ಪ್ರವಾಹ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಬೇಕಿದ್ದ ವಿಮಾನಯಾನ ಸಂಸ್ಥೆಗಳು ಜನರನ್ನು ದೋಚಲು ಹೊರಟಿರುವುದರ ಬಗ್ಗೆ, ಸಾರ್ವಜನಿಕರು ಟ್ವೀಟ್ ಮೂಲಕ ಖಂಡಿಸಿದ್ದಾರೆ. ಈ ಬಗ್ಗೆ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರಿಗೆ ಅನೇಕ ಮಂದಿ ಟ್ವೀಟ್ ಮಾಡಿದ್ದು, ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿ , ಪ್ರವಾಹ ಪೀಡಿತ ಪ್ರದೇಶಗಳಾದ ಕೇರಳ, ಹಾಗೂ ಮಂಗಳೂರು ಮತ್ತು ಸಮೀಪದ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ನಡೆಸುವ ವಿಮಾನಗಳ ದರವನ್ನು ಹೆಚ್ಚಿಸಬಾರದು ಎಂದು ಆದೇಶಿಸಿದ್ದೇನೆ ಎಂದಿದ್ದಾರೆ. ಆದರೂ ವಿಮಾನ ಯಾನ ಸಂಸ್ಥೆಗಳು ದರ ಪರಿಷ್ಕರಣೆ ಮಾಡದಿರುವುದಕ್ಕೆ ಸಾರ್ವನಿಕರು ಖೇದ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕೆ.ಎಸ್ ಆರ್ .ಟಿ. ಸಿ ಮಂಗಳೂರು - ಬೆಂಗಳೂರು ಸಂಚಾರದ ಹಲವು ಟ್ರಿಪ್ ಗಳನ್ನು ಖಡಿತಗೊಳಿಸಿರುವುದರಿಂದ, ಖಾಸಗಿ ಬಸ್ ಗಳು ತನ್ನ ದರವನ್ನು ಹೆಚ್ಚಿಸಿ ಲಾಭ ಪಡೆಯುತ್ತಿದೆ. ಈ ಹಿಂದೆ 550-600 ರೂಪಾಯಿದ ದರವಿದ್ದದ್ದು ಇದೀಗ 800 ರೂ ಆಗಿದೆ.