ಆ 20: ಜಲ ಪ್ರಳಯಕ್ಕೆ ತತ್ತರಿಸಿರುವ ಕೇರಳದ ನೆರೆ ಸಂತ್ರಸ್ತರಿಗೆ ದೇಶ ವಿದೇಶದಿಂದ ನೆರವಿನ ಮಹಾಪೂರಾ ಹರಿದು ಬರುತ್ತಿದೆ. ಆದರೆ ತನ್ನದೇ ರಾಜ್ಯದ ನಿರಾಶ್ರಿತರ ಬಗ್ಗೆ ಹೊರದೇಶದಲ್ಲಿರುವ ಕೇರಳಿಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಬರಹವನ್ನು ಪೋಸ್ಟ್ ಮಾಡಿ ತನ್ನ ಉದ್ಯೋಗವನ್ನೇ ಕಳೆದುಕೊಂಡಿದ್ದಾನೆ.
ರಾಹುಲ್ ಚೆರು ಪಾಲಯಟ್ಟು ಈ ರೀತಿ ಅಸಭ್ಯವಾಗಿ ಬರಹ ಪೋಸ್ಟ್ ಮಾಡಿದ ವ್ಯಕ್ತಿ. ಈತ ಒಮನ್ನಲ್ಲಿ ಲುಲು ಗ್ರೂಪ್ ಇಂಟರ್ನ್ಯಾಶನಲ್ ಕಂಪೆನಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಕೇರಳದ ಪ್ರವಾಹ ಸಂತ್ರಸ್ತರ ನೆರವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಪೋಸ್ಟ್ ಮಾಡಿದ್ದಾನೆ ಎಂಬ ಕಾರಣಕ್ಕೆ ಈತನನ್ನು ಗಲ್ಫ್ ಮೂಲದ ಕಂಪನಿ ಕೆಲಸದಿಂದ ತೆಗೆದು ಹಾಕಿ ತಕ್ಕ ಪಾಠ ಕಲಿಸಿದೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಜತೆಗೆ ಮಹಿಳೆಯರಿಗೆ ಸ್ಯಾನಿಟರಿ ವಸ್ತುಗಳ ಅಗತ್ಯವಿದ್ದು, ಅದಕ್ಕೆ ಸ್ವಯಂಪ್ರೇರಿತರಾಗಿ ಸಹಾಯ ಮಾಡಬೇಕೆಂಬ ಮನವಿಯ, ಫೇಸ್ಬುಕ್ ಬರಹಕ್ಕೆ ರಾಹುಲ್ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದ.ರಾಹುಲ್ ನ ಈ ಕಮೆಂಟ್ ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಅಸಭ್ಯ ವರ್ತನೆ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿದ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ಲುಲು ಗ್ರೂಪ್ ಕಂಪೆನಿಯ ಮುಖ್ಯ ಸಂಪರ್ಕ ಅಧಿಕಾರಿ ನಂದಕುಮಾರ್ ರಾಹುಲ್ನನ್ನು ತಕ್ಷಣದಿಂದ ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನಮ್ಮ ಕಂಪನಿ ಮಾನವೀಯತೆ ಮತ್ತು ನೈತಿಕ ನಿಲುವನ್ನು ಹೊಂದಿದ್ದು, ಈ ರೀತಿ ವರ್ತನೆ ತೋರಿದ ಹಿನ್ನಲೆ ನಾವು ತಕ್ಷಣಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಸ್ಪಷ್ಟವಾಗಿ ಅವರಿಗೆ ಸಂದೇಶವನ್ನು ಕೂಡ ನೀಡಿದ್ದೇವೆ ಕಂಪನಿಯ ಎಚ್.ಆರ್ ಸ್ಪಷ್ಟಪಡಿಸಿದ್ದಾರೆ
ಈ ಬೆಳವಣಿಗೆಗಳ ನಂತರ , ಸಾಮಾಜಿಕ ಜಾಲತಾಣದಲ್ಲಿ ಬರೆದ ತನ್ನ ಬರಹಕ್ಕೆ ಕ್ಷಮೆಯಾಚಿಸುವೆ. ಫೇಸ್ಬುಕ್ ಸಂದೇಶ ಹಾಕುವಾಗ ಅದೊಂದು ದೊಡ್ಡ ತಪ್ಪು ಎಂದು ಅರಿವಾಗಲಿಲ್ಲ ಎಂದು ರಾಹುಲ್ ಕ್ಷಮೆಯಾಚಿಸಿದ್ದಾರೆ.