ಉಳ್ಳಾಲ ಆ 21: ಮದುವೆಯ ಕರೆಯೋಲೆ ನೀಡುವ ನೆಪವೊಡ್ಡಿ ಬುರ್ಖಾ ಧರಿಸಿದ್ದ ಇಬ್ಬರು ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಚಿನ್ನಾಭರಣ ಕಳವುಗೈದ ಘಟನೆ ಆ. 20ರ ಸೋಮವಾರ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿಯ ಮಂಗಳ ನಗರದಲ್ಲಿ ನಡೆದಿದೆ.
ಲತೀಫ್ ಎಂಬವರ ಮನೆಗೆ ಬಂದ ಆಗಂತುಕರು, ಅವರ ಪತ್ನಿಯನ್ನು ಬೆದರಿಸಿ ಕೊಠಡಿಯೊಳಗಿದ್ದ ಸುಮಾರು 20 ಪವನ್ ಚಿನ್ನಾಭರಣವನ್ನು ದರೋಡೆಗೈದಿದ್ದಾರೆ. ದೇರಳಕಟ್ಟೆಯಲ್ಲಿದ್ದ ಉದ್ಯಮ ನಡೆಸುತ್ತಿದ್ದ ಲತೀಫ್ ಸೋಮವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದರು. ಆ ಹೊತ್ತಿಗೆ ಬುರ್ಖಾಧಾರಿಯೊಂದಿಗೆ ಇನ್ನೊಬ್ಬ ಆಗಂತುಕ ಬೈಕ್ ನಲ್ಲಿ ಬಂದು ಕಾಲಿಂಗ್ ಬೆಲ್ ಒತ್ತಿ ಮದುವೆ ಆಮಂತ್ರಣ ನೀಡಲು ಬಂದಿದ್ದೇನೆ ಎಂದು ತಿಳಿಸಿದ್ದರು. ಮಹಿಳೆಯೂ ಜತೆಯಲ್ಲಿ ಇರುವ ಕಾರಣದಿಂದ ಲತೀಫ್ ಪತ್ನಿ ಬಾಗಿಲು ತೆರೆದಾಗ ಬುರ್ಖಾ ಧರಿಸಿದ್ದ ವ್ಯಕ್ತಿ ಮತ್ತು ಇನ್ನೋರ್ವ ಮನೆಯೊಳಗೆ ನುಗ್ಗಿ ಸುಮಾರು 20 ಪವನ್ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಲತೀಫ್ ಪತ್ನಿ ಕೊಠಡಿಯೊಂದಕ್ಕೆ ಹೋಗಿ ಬಾಗಿಲು ಹಾಕಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ.
ದರೋಡೆಕೋರರು ಬೈಕ್ ನಲ್ಲಿ ತೆರಳಿದ ಬಳಿಕ ಲತೀಫ್ ಪತ್ನಿ ಹೊರಗಡೆ ಬಂದು ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದು, ಅಷ್ಟೊತ್ತಿಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಲಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.