ಆ 21: ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) 700 ಕೋಟಿ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಪ್ರವಾಹದಿಂದ ಹಲವಾರು ಜನ ತಮ್ಮ ಮನೆ-ಮಠ ಕಳೆದುಕೊಂಡಿದ್ದು, ಅಲ್ಲಿರುವ ಸಂತ್ರಸ್ತರು ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ದೇಶ-ವಿದೇಶದಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಅರಬ್ ಸಂಯುಕ್ತ ಸಂಸ್ಥಾನ ನೀಡಿದ ಆರ್ಥಿಕ ಸಹಾಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ಸಲ್ಲಿಸಿದ್ದಾರೆ.
ಯುಎಇ ಅಭಿವೃದ್ದಿಯಲ್ಲಿ ಕೇರಳ ಕಾರ್ಮಿಕರ ಕೊಡುಗೆ ಅಪಾರ. ಇದರಿಂದಾಗಿ ಕೇರಳದ ಸಂತ್ರಸ್ತರಿಗೆ ಇಂಥ ಸಮಯದಲ್ಲಿ ಸಹಾಯ ಮಾಡುವ ವಿಶೇಷ ಜವಾಬ್ದಾರಿ ನಮ್ಮ ಮೇಲಿದೆ ಎಂದು ಯುಎಇ ಉಪಾಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಅಲ್ ರಶೀದ್ ಅಲ್ ಮಕ್ತೌಮ್ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿ ನೆರವು ಯಾಚಿಸಿದ್ದರು.
ಇನ್ನು ಕೇರಳದಲ್ಲಿ ಮಳೆ ಕಡಿಮೆಯಾದರೂ ಅಲ್ಲಿರುವ ನೆರೆ ತಗ್ಗಿಲ್ಲ. ಅನೇಕ ಸಂತ್ರಸ್ತರು ಮನೆಕಳೆದುಕೊಂಡಿದ್ದಾರೆ. ಸರಿಯಾಗಿದ್ದ ಮನೆಯಲ್ಲಿ ಹೂಳು ಹಾಗೂ ತ್ಯಾಜ್ಯ, ಮಣ್ಣು ತುಂಬಿಕೊಂಡು ವಾಸಕ್ಕೆ ಅಯೋಗ್ಯವಾಗಿದೆ.