ಕಾಸರಗೋಡು, ಆ 21 : ಎಣ್ಮಕಜೆ ಗ್ರಾಮ ಆಡಳಿತ ಸಮಿತಿ ಯುಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆಗೆ ಕೇರಳ ರಾಜ್ಯ ಚುನಾವಣಾ ಆಯೋಗ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ನಿಯಮ ಪ್ರಕಾರ ಅವಿಶ್ವಾಸ ಗೊತ್ತುವಳಿ ಮಂಡನೆಗೂ ಏಳು ದಿನಗಳ ಮುಂಚಿತವಾಗಿ ಪಂಚಾಯತ್ ಸದಸ್ಯರಿಗೆ ನೋಟಿಸ್ ನೀಡಬೇಕಾಗಿದೆ. ಆದರೆ ಬಿಜೆಪಿ ಸದಸ್ಯರಿಗೆ ತಡವಾಗಿ ನೋಟಿಸ್ ನೀಡಿದ್ದು, ಇದನ್ನು ಪ್ರಶ್ನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ರೂಪವಾಣಿ ಆರ್ . ಭಟ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಇದು ಚುನಾವಣಾ ನಿಯಮದ ಉಲ್ಲಂಘನೆಯಾಗಿದ್ದು, ಅವಿಶ್ವಾಸ ಮಂಡನೆ ಚರ್ಚೆಯನ್ನು ರದ್ದುಗೊಳಿಸುವಂತೆ ಹಾಗೂ ಈ ವಿಷಯವನ್ನು ಅವಿಶ್ವಾಸ ಗೊತ್ತುವಳಿ ಮಿನಿಟ್ಸ್ನಲ್ಲಿ ದಾಖಲಿಸುವಂತೆ ತಿಳಿಸಿ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಅವಿಶ್ವಾಸ ಗೊತ್ತುವಳಿ ಮಂಡನೆ ವಿರುದ್ಧ ಚುನಾವಣಾ ಅಧಿಕಾರಿಯೂ ಆಗಿರುವ ಮಂಜೇಶ್ವರ ಬ್ಲಾಕ್ ಪಂಚಾಯ ತ್ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಬಳಿಕ ರಾಜ್ಯ ಚುನಾವಣಾ ಅಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಿದ್ದರು.
ಇದೀಗ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಅಧಿಕಾರಿಯಿಂದ ಸ್ಪಷ್ಟೀಕರಣ ಕೇಳಿದ್ದು, ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಶೀಘ್ರವಾಗಿ ಹಸ್ತಾಂತರಿಸುವಂತೆ ತಿಳಿಸಿದ್ದಲ್ಲದೆ ಸಮಗ್ರ ಪರಿಶೀಲನೆ ಬಳಿಕವಷ್ಟೇ ಮುಂದಿನ ಹೆಜ್ಜೆ ಇರಿಸುವಂತೆ ಸೂಚನೆ ನೀಡಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್. ಭಟ್ ವಿರುದ್ಧ ಕಾಂಗ್ರೆಸ್ನ ಶಾರದಾ ವೈ., ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ವಿರುದ್ಧ ಮುಸ್ಲಿಂ ಲೀಗ್ನ ಸಿದ್ದಿಕ್ ವಳಮೊಗರು ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದು, ಆ. 8 ಹಾಗೂ 9ರಂದು ಅವಿಶ್ವಾಸ ಗೊತ್ತುವಳಿ ಚರ್ಚೆ ಬಳಿಕ ನಡೆದ ಮತದಾನದಲ್ಲಿ ಯುಡಿಎಫ್ ನ ಏಳು ಸದಸ್ಯರು ಹಾಗೂ ಎಲ್ಡಿಎಫ್ ನ ಮೂವರು ಗೊತ್ತುವಳಿ ಪರ ಮತ ಚಲಾಯಿಸಿದ್ದರ ಪರಿಣಾಮ ಒಟ್ಟು 17 ಸ್ಥಾನ ಹೊಂದಿದ್ದ ಎಣ್ಮಕಜೆ ಪಂಚಾಯಿತಿಯಲ್ಲಿ 7 ಸದಸ್ಯರನ್ನು ಹೊಂದಿರುವ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು.