ಸುಬ್ರಹ್ಮಣ್ಯ, ಆ 21(SM): ಮಳೆಯ ರೌದ್ರಾವತಾರಕ್ಕೆ ನಿಸರ್ಗ ಸೌಂದರ್ಯದ ಸ್ವರ್ಗವಾಗಿದ್ದ ಬಿಸಿಲೆ ಘಾಟ್ನಲ್ಲೂ ಜಲಪ್ರಳಯ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಜನಸಂಪರ್ಕ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ನಡುವೆ ಹಾಸನ -ಮೈಸೂರು- ಕೊಡಗು ಜಿಲ್ಲೆಯ ಜನರನ್ನು ಕರಾವಳಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ-೮೫ರ ಬೆಂಗಳೂರು- ಜಲ್ಸೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆಯ ರಭಸಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ 11 ಕಿ.ಮೀ. ದೂರವಿರುವ ಬಿಸಿಲೆಯ ಸಮೀಪ ಚೌಡಮ್ಮನ ಗುಡಿ ಬಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಕುಸಿದಿದೆ.
ಬೆಟ್ಟದ ಮೇಲಿಂದ ಸಣ್ಣ ತೊರೆಯಂತೆ ಹರಿಯುತ್ತಿದ್ದ ನದಿ ಇದೀಗ ಬೋರ್ಗರೆಯುತ್ತಿದೆ. ಸೇತುವೆಗಳು ಕೊಚ್ಚಿಹೋಗಿದ್ದು, ಮಣ್ಣುಪಾಲಾಗಿವೆ. ಅರಣ್ಯ ಭಾಗದ ಸುಮಾರು ನಾಲ್ಕು ಕಿ.ಮೀ. ಮೇಲಿನ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ಬಾರೀ ಪ್ರವಾಹದೊಂದಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿವೆ. ಕೆಲವೊಂದು ಬೃಹತ್ ಮರಗಳು ಸಂಪೂರ್ಣವಾಗಿ ರಸ್ತೆಯನ್ನು ಆಕ್ರಮಿಸಿವೆ. ಗುಡಿಪಕ್ಕದ ಜರಿಯಲ್ಲಿ ಹರಿದು ಬಂದ ಬೃಹತ್ ದಿಮ್ಮಿ ಹಾಗೂ ರಸ್ತೆಯಲ್ಲಿ ತುಂಬಿದ್ದ ಕೆಸರನ್ನು ಕುಲ್ಕುಂದ ಮತ್ತು ಸುಬ್ರಹ್ಮಣ್ಯದ ನೂರಾರು ನಾಗರೀಕರು ಶ್ರಮದಾನದ ಮೂಲಕ ತೆರವುಗೊಳಿಸಿದ್ದಾರೆ. ಈ ಮಾರ್ಗದ ಸಕಲೇಶ್ಪುರ ವಿಭಾಗಕ್ಕೆ ಸೇರಿ ಅಶೋಕ ಕೊಲ್ಲಿ ಹಾಗೂ ಮೇಲಿನ ತಿರುವಿನಲ್ಲಿ ಭೂಕುಸಿತ ಉಂಟಾಗಿ ರಸ್ತೆ ಮೇಲೆ ಬಿದ್ದಿರುವ ಮರ, ಬೃಹತ್ ಬಂಡೆಕಲ್ಲು ಹಾಗೂ ಮಣ್ಣು ತಕ್ಷಣಕ್ಕೆ ತೆರವುಗೊಳಿಸಿದ್ದಲ್ಲಿ ಈ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳಬಹುದಾಗಿದೆ.