ಮಂಗಳೂರು, ಆ ೨೧(SM): ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ವತಿಯಿಂದ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಬಿಷಪ್ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರಿಗೆ ಬಿಳ್ಕೊಡುಗೆ ಸಮಾರಂಭ ಆಗಸ್ಟ್ ೨೧ರಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಷಪ್ “ಕಳೆದ ೨೨ ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷನಾಗಿದ್ದ ನನಗೆ ಪ್ರೀತಿಯನ್ನು ತೋರಿದ ನಿಮಗೆಲ್ಲರಿಗೂ ಕೃತಜ್ಞತೆಗಳು. ಸುಮಾರು ೧೩೭ ವರ್ಷಗಳ ಹಿಂದೆ ಫಾದರ್ ಮುಲ್ಲರ್ ಸಂಸ್ಥೆ ಆಲದ ಮರದ ಕೆಳಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಇದೀಗ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತು ಸಹಸ್ರ ಸಹಸ್ರ ರೋಗಿಗಳಿಗೆ ಆರೋಗ್ಯವನ್ನು ನೀಡುತ್ತಿದೆ” ಎಂದರು.
“ಸಂಸ್ಥೆ ಬೆಳೆಯಲು ಸಿಬ್ಬಂದಿಗಳು ಹತ್ತು ಹಲವು ರೀತಿಯಲ್ಲಿ ಸಹಕರಿಸಿದ್ದು, ಅವರ ಶ್ರಮವನ್ನು ಮರೆಯುವಂತಿಲ್ಲ. ಪ್ರತಿಯೊಬ್ಬರು ಸಂಸ್ಥೆಯ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಗೆ ಇಲ್ಲಿಂದ ಮತ್ತಷ್ಟು ಸೇವೆ ಲಭಿಸಲಿ” ಎಂದರು.
ಇನ್ನು ಇದೇ ಸಂದರ್ಭದಲ್ಲಿ ೨೨ ವರ್ಷಗಳ ಸುದೀರ್ಘ ಸೇವೆಗಾಗಿ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ನಿಯೋಜಿತ ಬಿಷಪ್ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ, ಸಂಸ್ಥೆಯ ನಿರ್ದೇಶಕರಾದ ವಂ. ರಿಚರ್ಡ್ ಕುವೆಲ್ಲೊ, ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡೆನ್ನಿಸ್ ಮೊರಸ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.