ಉಡುಪಿ, ಆ 23 (MSP): ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಕುರಿತ ಎಫ್ಎಸ್ಎಲ್ ವರದಿ ಹೊರಬಿದ್ದಿದೆ. ಶ್ರೀಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದು ಯಾವುದೇ ವಿಷ ಪ್ರಾಶನವಾಗಿಲ್ಲ ಎನ್ನುವ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿ ಕೊನೆಗೂ ಪೊಲೀಸರ ಕೈ ಸೇರಿದೆ. ಶ್ರೀ ಲಕ್ಷ್ಮೀವರ ಸ್ಚ್ವಾಮೀಜಿ ಲಿವರ್ ನ(ಯಕೃತ್) ಸಿರೋಸಿಸ್ ಕಾಯಿಲೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ ಎನ್ನುವ ಸಾರಾಂಶ ಈ ವರದಿಯಲ್ಲಿದೆ. ಈ ವರದಿ ಸ್ವಾಮೀಜಿಯ ಸಾವಿನ ಬಳಿಕ ಎದ್ದಿರುವ ಅನೇಕ ಸಂಶಯಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.
ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯನ್ನು, ಮರಣೋತ್ತರ ಪರೀಕ್ಷೆಯ ವರದಿಯೊಂದಿಗೆ ತಾಳೆ ಹಾಕಿ ಸ್ವಾಮೀಜಿ ಲಿವರ್ ಸಂಬಂಧಿತ ಸಿರೋಸಿಸ್ ಕಾಯಿಲೆಯಿಂದಲೇ, ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಈ ವರದಿಯಲ್ಲಿ ಎಲ್ಲಿಯೂ ಕೂಡಾ 'ವಿಷ 'ದ ಕುರಿತು ಉಲ್ಲೇಖವಾಗಿಲ್ಲ. ಅಂತಿಮ ವರದಿ ಬಂದ ನಂತರವೂ ಪೊಲೀಸರು ಕೆಲವು ವಿಚಾರಗಳಲ್ಲಿ ಸ್ಪಷ್ಟತೆ ಬಯಸಿ ಕೆಎಂಸಿ ಆಸ್ಪತ್ರೆಗೆ ಪ್ರಶ್ನಾವಳಿಯೊಂದನ್ನು ತಯಾರಿಸಿ ಉತ್ತರಿಸುವಂತೆ ತಿಳಿಸಿದ್ದಾರೆ. ಜುಲೈ 19 ರಂದು ಸ್ವಾಮೀಜಿ ಮೃತಪಟ್ಟಿದ್ದ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಸ್ವಾಮೀಜಿ ದೇಹದಲ್ಲಿ ವಿಷ ಕಂಡುಬಂದಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದರು. ನಂತರ ಮರಣೋತ್ತರ ಪರೀಕ್ಷೆಗೆ ಆದೇಶಿಸಲಾಗಿತ್ತು. ಈಗ ವರದಿಯಲ್ಲಿ ವಿಷದ ಅಂಶವಿಲ್ಲದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಪಷ್ಟತೆ ಬಯಸಿದ್ದಾರೆ. ಹೀಗಾಗಿ ಆಗಸ್ಟ್ 24 ರ ಒಳಗೆ ಆಸ್ಪತ್ರೆಯಿಂದ ಉತ್ತರವನ್ನು ಪೊಲೀಸರು ಬಯಸಿದ್ದು, ಹೀಗಾಗಿ ಈ ವಾರದಲ್ಲಿ ಪ್ರಕರಣಕ್ಕೆ ಅಂತಿಮ ತೆರೆ ಎಳೆಯುವ ಸಾಧ್ಯತೆಗಳಿವೆ.
ಶಿರೂರು ಶ್ರೀ ಸಾವಿನ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಮಠದ ಸಿಬ್ಬಂದಿಗಳು,ಕುಟುಂಬ ದವರು, ಮಿತ್ರರು, ಆರ್ಥಿಕ ವ್ಯವಹಾರವಿದ್ದವರು, ಮದ್ಯ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸೇರಿ 80ಕ್ಕೂ ಹೆಚ್ಚು ಮಂದಿ ಯನ್ನು ವಿಚಾರಣೆಗೆ ಒಳಪಡಿಸಿದ್ದರು.