ಬೆಳ್ತಂಗಡಿ, ಆ 22 (MSP): ಮಹಾನಗರದಲ್ಲಿ ಮಹಿಳೆಯರು ಪಾನಮತ್ತರಾಗಿ ಅವಾಂತರ ಸೃಷ್ಟಿಸುವ ಸುದ್ದಿ ಇತ್ತೀಚೆಗೆ ಸರ್ವೆಸಾಮಾನ್ಯ. ಆದರೆ ಇಂಥಹ ಘಟನೆಗಳು ಊರು - ಪಟ್ಟಣಗಳಲ್ಲಿ ಕಂಡು ಬರೋದು ಅಪರೂಪ. ಆದರೆ ಎಲ್ಲಿಂದಲೋ ಬಂದ ಮಹಿಳೆಯರು ಕುಡಿದು ಅಮಲೇರಿಸಿಕೊಂಡು ಸಾರ್ವಜನಿಕರಿಗೆ ಇರಿಸುಮುರಿಸು ಮಾಡಿದ ಘಟನೆ ಬೆಳ್ತಂಗಡಿಯ ಪೇಟೆಯಲ್ಲಿ ಆಗಸ್ಟ್ 22ರ ಮಂಗಳವಾರ ನಡೆದಿದೆ. ಕೊನೆಗೂ ಈ ಮಹಿಳೆಯರ ಉಪದ್ರ ತಾಳಲಾರದೆ ಸಾರ್ವಜನಿಕರೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳ್ತಂಗಡಿಯ ಪೇಟೆಯಲ್ಲಿ ಮಹಿಳೆಯರಿಬ್ಬರು ಕುಡಿದು ತೂರಾಡುತ್ತಿದ್ದರು. ಬೇರೆಯವರ ಉಸಾಬರಿ ನಮಗ್ಯಾಕೆ ಎಂದು ಸುಮ್ಮನಿದ್ದ ಸಾರ್ವಜನಿಕರಿಗೆ, ಸಮಯ ಕಳೆಯುತ್ತಿದ್ದಂತೆ ಪಾನಮತ್ತ ಮಹಿಳೆಯರಿಂದ ಉಪಟಳ ಜಾಸ್ತಿಯಾಗಲು ಪ್ರಾರಂಭವಾಗಿತ್ತು. ಅವರೊಂದಿಗಿದ್ದ ಇಬ್ಬರು ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸಿ ಅದರಿಂದ ಬಂದ ಹಣದಲ್ಲಿ ಈ ಇಬ್ಬರು ಮಹಿಳೆಯರು ಮದ್ಯ ಸೇವಿಸಿ ಸಾರ್ವಜನಿಕ ವಲಯದಲ್ಲಿ ಗಲಾಟೆ ಮಾಡಲಾರಂಭಿಸಿದರು. ಇಷ್ಟು ಮಾತ್ರವಲ್ಲದೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಸಿಬ್ಬಂದಿಗಳ ಮೇಲೆಯೂ ಹಲ್ಲೆಗೆ ಯತ್ನಿಸಿದ್ದರು.
ಕೊನೆಗೂ ಇವರ ಅವಾಂತರ ತಾಳಲಾರದೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಬೆಳ್ತಂಗಡಿ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗಳು ಪಾನಮತ್ತ ಮಹಿಳೆಯರನ್ನು ಕರೆದೊಯ್ಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಮಕ್ಕಳ ಸಮೇತ ಸ್ಥಳೀಯ ಆಟೋ ಚಾಲಕರ ಸಹಾಯದಿಂದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಠಾಣೆಗೆ ಕರೆದೊಯ್ದಿದ್ದಾರೆ. ಇಷ್ಟೆಲ್ಲಾ ಕಿರಿಕ್ ಮಾಡಿದ ಮಹಿಳೆಯರು ಎಲ್ಲಿಯವರು ಎಂದು ತಿಳಿದು ಬಂದಿಲ್ಲ. ಸದ್ಯ ವಶಕ್ಕೆ ತೆಗೆದುಕೊಂಡ ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.