ಉಡುಪಿ, ಅ 3 : ಬೈಕ್ ಸ್ಕಿಡ್ ಆದಾ ಪರಿಣಾಮ ಮಗುವೊಂದು ಮೃತಪಟ್ಟ ಧಾರುಣ ಘಟನೆ ಸೋಮವಾರ ಸಂಜೆ ಪರ್ಕಳದಲ್ಲಿ ನಡೆದಿದೆ. ಒಂದೂವರೆ ವರ್ಷದ ಚಿರಾಗ್ ಮೃತ ಮಗು. ಉದ್ಯಾವರ ಕಲಾಯಿಬೈಲು ನಿವಾಸಿ ಉಮೇಶ್ ಪೂಜಾರಿ ಹಾಗೂ ಪ್ರಮೋದ ದಂಪತಿಯ ಏಕೈಕ ಪುತ್ರ. ರಸ್ತೆಯಲ್ಲಿದ್ದ ಹೊಂಡದಿಂದಾಗಿ ಬೈಕ್ ಸ್ಕಿಡ್ ಆಗಿ ತಾಯಿಯ ಕೈಯಲ್ಲಿದ್ದ ಜಾರಿ ರಸ್ತೆಗೆ ಬಿದ್ದು ಮೃತಪಟ್ಟಿದೆ. ಮಣಿಪಾಲದಿಂದ ಹಿರಿಯಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿರುವುದರಿಂದ ಪರ್ಕಳದ ಬಳಿ ಉಮೇಶ್ ಹೊಂಡವನ್ನು ತಪ್ಪಿಸಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸಂಪೂರ್ಣವಾಗಿ ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದು, ರಸ್ತೆ ದುರಸ್ತಿಯಾಗದ ಹಿನ್ನೆಲೆ ಇಂತಹ ಅವಘಡಗಳು ಸಂಭವಿಸಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.