ಲಕ್ನೋ, ಆ 22(SS): ಇಂದು ಎಲ್ಲೆಡೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಕೋಮು ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರ ಈ ರೀತಿಯ ಕಠಿಣ ಆದೇಶವೊಂದನ್ನು ಜಾರಿ ಮಾಡಿದ್ದು, ಬಹಿರಂಗವಾಗಿ ಪ್ರಾಣಿಗಳನ್ನು ಬಲಿ ಕೊಡಬಾರದು. ಸಾರ್ವಜನಿಕವಾಗಿ ಪ್ರಾಣಿಗಳ ಹತ್ಯೆ ಮಾಡಬಾರದು. ಮಾತ್ರವಲ್ಲ, ಬಲಿ ನೀಡಿದ ಪ್ರಾಣಿಗಳ ತ್ಯಾಜ್ಯವನ್ನು ಚರಂಡಿಗಳಲ್ಲಿ ಎಸೆಯುವಂತಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಜೊತೆಗೆ, ಎಲ್ಲಿಯೂ ಕೂಡ ರಕ್ತದ ಕೋಡಿ ಹರಿಯದಂತೆ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶದ ಸಿಎಂ ಸೂಚನೆ ನೀಡಿದ್ದಾರೆ.
ಬಹಿರಂಗವಾಗಿ ಪ್ರಾಣಿಗಳನ್ನು ಬಲಿ ನೀಡುವುದರಿಂದ ಇತರೆ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕವಾಗಿ ಪ್ರಾಣಿ ವಧೆ ಮಾಡುವುದು ಕೆಲ ಧರ್ಮಗಳ ನಂಬಿಕೆಗಳಿಗೆ ನೋವುಂಟು ಮಾಡಿದಂತಾಗುತ್ತದೆ. ಹಬ್ಬದ ಹೆಸರಿನಲ್ಲಿ ಪ್ರಾಣಿ ಹತ್ಯೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು, ಮುಖ್ಯಮಂತ್ರಿಗಳ ಆದೇಶ ಪಾಲಿಸಲು ಬದ್ಧರಾಗಿದ್ದೇವೆ. ಬಕ್ರೀದ್ ಹಿನ್ನೆಲೆ, ಶಾಂತಿ-ವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉಭಯ ಸಮುದಾಯದ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಯಾವುದೇ ರೀತಿಯಲ್ಲೂ ಪ್ರಾಣಿ ವಧೆ ಸಾರ್ವಜನಿಕವಾಗಿ ನಡೆಸಲು ಬಿಡುವುದಿಲ್ಲ. ಒಂದು ವೇಳೆ ನಿಯಮ ಮೀರಿ ಸಾರ್ವಜನಿಕವಾಗಿ ಪ್ರಾಣಿ ವಧೆ ಮಾಡುತ್ತಿರುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ಹಾಗೂ ಸುವ್ಯವಸ್ಥೆ ಕಾಯ್ದಕೊಳ್ಳುವ ನಿಟ್ಟಿನಲ್ಲಿ ಸಿಎಂ ಈ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.