ಕಾಸರಗೋಡು, ಆ 22 (MSP):ಬಕ್ರೀದ್ ಹಬ್ಬದ ಸಡಗರದಲ್ಲಿತ್ತು ಆ ಕುಟುಂಬ, ಮನೆಮಂದಿಗೆಲ್ಲಾ ಹೊಸವಸ್ತ್ರ ತೊಡುವ ಸಂಭ್ರಮ..ಆದರೆ ಹಬ್ಬಕ್ಕಾಗಿ ಹೊಸ ಬಟ್ಟೆ ತರಲೆಂದು ಹೊರಟ ಮನೆಮಗ ವಾಪಾಸು ಬಂದಿದ್ದು ಮಾತ್ರ ಶವವಾಗಿ. ಈ ಮನಕಲಕುವ ಘಟನೆ ನಡೆದಿದ್ದು ಕಾಸರಗೋಡಿನ ಬದಿಯಡ್ಕದಲ್ಲಿ.
ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ವಸ್ತ್ರ ಖರೀದಿಸಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಬದಿಯಡ್ಕದ ಅಲಿ ಶಾನ್ (26) ಎಂದು ಗುರುತಿಸಲಾಗಿದೆ. ಹಬ್ಬದ ಬಟ್ಟೆ ಖರೀದಿಸಿ ಅದೇ ಖುಷಿಯಲ್ಲಿ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ಅಲಿ ಶಾನ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ 22ರ ಬುಧವಾರ ಅಲಿ ಶಾನ್ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ನಾಲ್ವರಿಗೂ ಗಾಯಗಲಾಗಿದ್ದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಕ್ರೀದ್ ಹಬ್ಬರ ಸಡಗರದಲ್ಲಿದ್ದ ಕುಟುಂಬಕ್ಕೆ ದಾರುಣ ದುರಂತ ಶೋಕತಪ್ತವನ್ನಾಗಿಸಿದೆ . ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.