ಸುಳ್ಯ, ಆ 22(MSP): ಪ್ರಕೃತಿ ವಿಕೋಪದಿಂದ ನಲುಗಿದ ಜೋಡುಪಾಲದಲ್ಲಿರುವ ಹಲವು ಕುಟುಂಬಗಳಿಗೆ ಈಗ ಹೊಸ ಬದುಕು ಕಟ್ಟುವ ಅನಿವಾರ್ಯತೆ. ಉಟ್ಟ ಬಟ್ಟೆಯಲ್ಲಿ ಪರಿಹಾರ ಕೇಂದ್ರವನ್ನು ಸೇರಿಕೊಂಡವರು ಅದೆಷ್ಟೋ ಮಂದಿ. ಮನೆ ಮಠ ಹೀಗೆ ತನ್ನೆಲ್ಲಾವನ್ನು ಕಳೆದುಕೊಂಡ ಅಕ್ಷರಶಃ ಬೀದಿಗೆ ಬಿದ್ದ ಪರಿಸ್ಥಿತಿ ಅದೆಷ್ಟೋ ಜನರದ್ದು. ಸಂತ್ರಸ್ತ ಕೇಂದ್ರಕ್ಕೆ ದಾಖಲಾಗಿರುವ ಕುಟುಂಬಗಳಿಗೆ ಸಾರ್ವಜನಿಕವಾಗಿ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿ ಪರಿಹಾರ ಕೇಂದ್ರದಲ್ಲಿರುವ ಪುರುಷರಿಗಾಗಿಯೇ ಸುಳ್ಯ ಬಾರ್ಬರ್ಸ್ ಆಸೋಸಿಯೇಶನ್ನ ಸವಿತ ಸಮಾಜದವರು ಉಚಿತ ಕ್ಷೌರ ಮಾಡುವ ಮೂಲಕ ವಿನೂತನ ಸೇವೆ ಸಲ್ಲಿಸುತ್ತಿದ್ದಾರೆ.ಸೆಲೂನ್ಗಳಿಗೆ ರಜಾದಿನವಾದ ಮಂಗಳವಾರ ಬಾರ್ಬರ್ಸ್ ಅಸೋಸಿಯೇಶನ್ ಸದಸ್ಯರು ಈ ದಿನವನ್ನು ನಿರಾಶ್ರಿತರ ಸೇವೆಗಾಗಿ ಮೀಸಲಿರಿಸಲು ನಿರ್ಧರಿಸಿ ನಿರಾಶ್ರಿತರಿಗೆ ಉಚಿತವಾಗಿ ಹೇರ್ಕಟ್ಟಿಂಗ್ ಮತ್ತು ಶೇವಿಂಗ್ ಮಾಡಿದರು.
ಅರಂತೋಡು ತೆಕ್ಕಿಲ್ ಸಭಾಭವನದಲ್ಲಿರುವ ಪರಿಹಾರ ಕೇಂದ್ರ, ಕಲ್ಲುಗುಂಡಿ ಪ್ರೌಢಶಾಲೆಯಲ್ಲಿರುವ ಪರಿಹಾರ ಕೇಂದ್ರ, ಸಂಪಾಜೆಯಲ್ಲಿರುವ ಪರಿಹಾರ ಕೇಂದ್ರಗಳಿಗೆ ಬೇಟಿ ನೀಡಿ ಉಚಿತ ಹೇರ್ ಕಟ್ಟಿಂಗ್ ಹಾಗೂ ಕ್ಷೌರ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರಲ್ಲಿ ಸವಿತಾ ಸಮಾಜದ ಸುಳ್ಯ ತಾಲೂಕಿನ 22 ಮಂದಿ, ಪುತ್ತೂರು ತಾಲೂಕಿನ 5 ಮಂದಿ ಇದ್ದಾರೆ . ಪ್ರತಿ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಜೀವನ ಸಮಿತಿ ವತಿಯಿಂದ ನಡೆಯುವ ಮದ್ಯವರ್ಜನ್ಯ ಶಿಬಿರದಲ್ಲಿ ಕೂಡ ಉಚಿತ ಕ್ಷೌರ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಸಮಾಜ ಬಾಂಧವರಿಗೆ ಉಚಿತ ಪುಸ್ತಕ ವಿತರಣೆ, ಬಡವರಿಗೆ ಸಹಕಾರ ಮಾಡುವ ಕೆಲಸದಲ್ಲಿ ಸವಿತಾ ಸಮಾಜದ ತನ್ನನ್ನು ತೊಡಗಿಸಿಕೊಂಡಿದೆ.