ಮಂಗಳೂರು, ಆ 22 (MSP): ಮಾದಕ ವಸ್ತುವಾದ MDMA Crystal, 2 ಪಿಸ್ತೂಲ್ ಮತ್ತು 22 ಮದ್ದುಗುಂಡು ಸಹಿತ 5 ಮಂದಿ ಕುಖ್ಯಾತ ಆರೋಪಿಗಳನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ.
ಆ.21ರ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ದಕ್ಷಿಣ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರು ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ಮಂಗಳೂರು ಕಡೆಯಿಂದ ಗುರುಪುರ ಸೇತುವೆ ಕಡೆಗೆ ತೆರಳುತ್ತಿದ್ದವರನ್ನು ಖಚಿತ ಮಾಹಿತಿ ಮೇರೆಗೆ ತಡೆದು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಿಸಿದಾಗ ಈ ಮಾದಕ ವಸ್ತುಗಳನ್ನು ಮುಂಬೈಯಿಂದ ತಂದು ಕೇರಳ ಮತ್ತು ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಪರಾರಿ ಜಂಕ್ಷನ್ ಬಳಿ ಕಾರು ಬಂದಾಗ ಅದನ್ನು ತಡೆದ ಪೊಲೀಸರು, ಆರೋಪಿಗಳಿಂದ ಸಾಗಾಟಕ್ಕಾಗಿ ಉಪಯೋಗಿಸಿದ್ದ 7 ಲಕ್ಷ ರೂ. ಮೌಲ್ಯದ ಬಲೆನೋ ಕಾರು, 5,500 ರೂ. ಮೌಲ್ಯದ ಗಾಂಜಾದಿಂದ ತಯಾರಿಸಿದ 11 ಉಂಡೆಗಳು, 1.80 ಲಕ್ಷ ರೂ. ಮೌಲ್ಯದ 100 ಗ್ರಾಂ ಮಾದಕ ವಸ್ತು MDMA Crystal, 2 ಪಿಸ್ತೂಲ್, 1.15 ಲಕ್ಷ ರೂ. ಮೌಲ್ಯದ 22 ಮದ್ದು ಗುಂಡುಗಳು, 11 ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟು ಸುಮಾರು 11,45,190 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕಾಸರಗೋಡು ನಿವಾಸಿ ಟಿ.ಎಚ್. ರಿಯಾಝ್(38), ಬಂಟ್ವಾಳ ಸಾಲೆತ್ತೂರಿನ ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್ (29), ಕಾಸರಗೋಡಿನ ಅಬ್ದುಲ್ ರವೂಫ್(30), ಇಮ್ತಿಯಾಝ್ ಅಹಮ್ಮದ್ ಹಾಗೂ ವಿಟ್ಲದ ಹಜ್ವರ್ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಟಿ.ಎಚ್.ರಿಯಾಝ್ ಎಂಬಾತನು ಕೇರಳ ರಾಜ್ಯದ ಕುಖ್ಯಾತ ಆರೋಪಿತನಾಗಿದ್ದು, ಈತನ ವಿರುದ್ದ ಸುಮಾರು 40 ಪ್ರಕರಣಗಳು ದಾಖಲಾಗಿದೆ. ಈತ ಮುಂಬೈನಿಂದ ಮಾದಕ ವಸ್ತುವನ್ನು ತಂದು ಮಾರಾಟ ಮಾಡುವ ಪ್ರಮುಖ ಆರೋಪಿಯಾಗಿದ್ದು, ಕೇರಳದ ಪಯಂಗಡಿ ಮತ್ತು ಬೇಕಲ ಠಾಣೆಗಳಲ್ಲಿ ವಾರಂಟ್ ಹೊಂದಿದ್ದಾನೆ.
ಇನ್ನು ಆರೋಪಿ ಉಸ್ಮಾನ್ ರಫೀಕ್ ಯಾನೆ ತಲ್ಕಿ ರಫೀಕ್ ನ ವಿರುದ್ದ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಸುಮಾರು 7 ಪ್ರಕರಣಗಳಲಿದ್ದು, ಈತನ ಮೇಲೆ ಕೇರಳದ ಮಂಜೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಬೆಂಗಳೂರು ಸಂಜಯನಗರ ಠಾಣೆಯಲ್ಲಿ ಸುಮಾರು 4 ತಿಂಗಳ ಹಿಂದೆ ಅನಧಿಕೃತ ಪಿಸ್ತೂಲ್ ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ.
ಆರೋಪಿ ಅಬ್ದುಲ್ ರವೂಫ್ ನಿಂದ ಒಂದು ನಾಡ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈತನು ಟಿ.ಹೆಚ್. ರಿಯಾಝ್ ನ ಮಾದಕ ವಸ್ತು ಮಾರಾಟ ಜಾಲದ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ. ಇಮ್ತಿಯಾಝ್ ವಿರುದ್ಧ ಕೇರಳ ಮಂಜೇಶ್ವರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಹಜ್ವರ್ ಈತ ಉಸ್ಮಾನ್ ರಫೀಕ್ ನ ಸಹಚರನಾಗಿದ್ದಾನೆ. ಪ್ರಕರಣವನ್ನು ಕಾನೂನು ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.