ಆ 21, (MSP): ದೇವರನಾಡು ಕೇರಳ ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಇನ್ನು ನೆರೆ ಅವರಿಸಿದಾಗ ಜೀವ ಉಳಿದರೆ ಸಾಕು ಎಂದು ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಬಂದವರು ನೆರೆ ತಗ್ಗಿದ ಬಳಿಕ ಮತ್ತೆ ತಮ್ಮ ಮನೆಗೆ ಪರಿಹಾರ ಕೇಂದ್ರ ತೊರೆದು ಹಿಂತಿರುಗುತ್ತಿದ್ದಾರೆ. ಇಲ್ಲಿ ಮನೆ ಕಳೆದುಕೊಂಡವರ ಗೋಳು ಒಂದು ರೀತಿಯಾಗಿದ್ದರೆ ಸುಸ್ಥಿತಿಯಲ್ಲಿದ್ದ ಮನೆಯಲ್ಲಿ ಹಾವು ಚೇಳು ಸರಿಸೃಪಗಳ ಕಾಟ..ಹೀಗಾಗಿ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಕಳೆದ 2 ದಿನಗಳಿಂದ ಮಳೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ನೀರು ತಗ್ಗಿದೆ. ಸುರಕ್ಷಿತ ಪ್ರದೇಶಗಳ ಗಂಜಿ ಕೇಂದ್ರಗಳಲ್ಲಿರುವ ಜನರು, ತಮ್ಮ ತಮ್ಮ ಮನೆಗಳ ಪರಿಸ್ಥಿತಿ ಅರಿಯಲು ಹಿಂತಿರುಗಿದ್ದು ಹಾವು, ಮೊಸಳೆಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಇನ್ನೊಂದೆಡೆ ತ್ರಿಶೂರ್ ಜಿಲ್ಲೆಯ ಚಾಲಕುಡಿಯಲ್ಲಿ ಸೋಮವಾರ ರಾತ್ರಿ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹಿಂತಿರುಗಿದ್ದರು. ಕಷ್ಟಪಟ್ಟು ಮನೆ ಪ್ರವೇಶಿದ ಅವರ ಮನೆಯಲ್ಲಿ ಹಾವು ಚೇಳುಗಳ ಬದಲು ಮೊಸಳೆ ಬಂದು ವಾಸವಾಗಿತ್ತು. ಇದನ್ನು ಕಂಡು ಬೆಚ್ಚಿ ಬಿದ್ದ ಅವರು ತಕ್ಷಣವೇ ಹೊರಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಹಗ್ಗದ ಸಹಾಯದಿಂದ ಮೊಸಳೆಯನ್ನು ಕಟ್ಟಿಹಾಕಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಲ್ಲಪ್ಪುರಂನ ಮುಸ್ತಾಫ್ ಎಂಬವರು ಹಾವು ಹಿಡಿಯುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಬಿಡುವಿಲ್ಲದಂತೆ ಹಾವು ಹಿಡಿಯಲು ಕರೆಗಳು ಬರುತ್ತಿದ್ದು, ಕೇವಲ ಎರಡು ದಿನದಲ್ಲಿ ಅವರು 100ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ. ಇನ್ನೊಂದೆಡೆ ಸಂಕ್ರಾಮಿಕ ರೋಗ ಹರಡುವ ಭಯ ಒಂದೆಡೆಯಾದರೆ ಎರ್ನಾಕುಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿಯೇ ಹಾವು ಕಚ್ಚಿದ್ದ 52 ಪ್ರಕರಣಗಳು ದಾಖಲಾಗಿದೆ. ಮನೆಯನ್ನು ಸ್ವಚ್ಛಗೊಳಿಸಲು ಬರುವ ಅನೇಕರು ಹಾವು ಕಾಣುತ್ತಿದ್ದಂತೆ ಭಯಗೊಂಡು ಅಲ್ಲಿಂದ ಮತ್ತೆ ವಾಪಾಸಾಗುತ್ತಿದ್ದಾರೆ ಎಂದು ವರದಿಯಾಗಿದೆ