ಸುಳ್ಯ, ಆ 22(SM): ಕಳೆದ ಒಂದು ವಾರದಿಂದ ಸತತವಾಗಿ ಗುಡ್ಡ ಕುಸಿಯುತ್ತಿರುವ ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಭಾಗಕ್ಕೆ ಆಗಸ್ಟ್ 22ರ ಬುಧವಾರದಂದು ಇಸ್ರೋ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಬಳಿಕ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಆತಂಕದ ವಿಚಾರವೊಂದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಪ್ರದೇಶಗಳು ಜನ ವಸತಿಗೆ ಅಯೋಗ್ಯವಾದ ಸ್ಥಳಗಳೆಂಬ ಅಭಿಪ್ರಾಯವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ವಿಜ್ಞಾನಿಗಳ ತಂಡ ಪ್ರದೇಶದಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ತಹಶೀಲ್ದಾರ್ ಕುಂಜಮ್ಮ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ವಾರದ ಹಿಂದೆ ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಗಾಳಿ ಮಳೆಯ ಸಂದರ್ಭ ಮದೆನಾಡು, ಜೋಡುಪಾಲ,ಮೊಣ್ಣಂಗೇರಿ ಪ್ರದೇಶಗಳಲ್ಲಿ ಗುಡ್ಡ ಜರಿದು ಪ್ರವಾಹ ಉಂಟಾಗಿತ್ತು. ಪರಿಣಾಮ ಹಲವಾರು ಮನೆಗಳಿಗೆ ಹಾನಿಯಾಗಿದೆ. ಬೃಹತ್ ಗಾತ್ರದ ಮರಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿವೆ. ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಮನೆ, ಜಮೀನು ಎಲ್ಲವನ್ನು ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆ ಅಲ್ಲಿನ ನಿವಾಸಿಗಳಿಗೆ ಪ್ರಶ್ನೆಯಾಗಿ ಕಾಡುತ್ತಿದೆ. ಮತ್ತೆ ಅದೇ ಪ್ರದೇಶದಲ್ಲಿ ನೆಲೆಸಲು ಭೀತಿ ಎದುರಾಗಿದೆ. ಆದರೆ, ಇದೀಗ ಇಸ್ರೋ ವಿಜ್ಞಾನಿಗಳ ಅಭಿಪ್ರಾಯದ ಬಳಿಕ ಅಲ್ಲಿನ ಜನತೆ ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಗೆ ಮುಂದಿನ ದಾರಿ ಏನೆಂದು ತೋಚದೆ ತಲೆಯ ಮೇಲೆ ಕೈ ಇಟ್ಟು ಕೂರುವಂತಾಗಿದೆ.