ಮಂಗಳೂರು, ಅ 3: ಇತ್ತೀಚೆಗೆ ಯಕ್ಷಗಾನ ಪ್ರದರ್ಶನದ ವೇಳೆ ನಡೆದ ಲಿಪ್ ಲಾಕ್ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು. ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಕಲಾವಿದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯುವ ಆಶಯ ವ್ಯಕ್ತಪಡಿಸಿದರು. " ಸನ್ನಿವೇಶದಲ್ಲಿ ನಟಿಸುವ ವೇಳೆ ತಪ್ಪು ಮಾಡಿಲ್ಲ, ಒಂದು ವೇಳೆ ನೋಡುವವರ ಕಣ್ಣಿಗೆ ತಪ್ಪಾಗಿ ಕಂಡಿದ್ದರೆ, ಅದಕ್ಕೆ ನಾವು ಮನಪೂರ್ವಕವಾಗಿ ಕ್ಷಮೆಯಾಚಿಸುತ್ತಿದ್ದೇವೆ. ಘಟನೆಯ ಬಳಿಕದ ಬೆಳವಣಿಗೆ ಕಂಡು ಮನನೊಂದು ನಾವು ಯಕ್ಷಗಾನ ಕ್ಷೇತ್ರದಿಂದ ನಿರ್ಗಮಿಸುವ ಬಗ್ಗೆ ಹೇಳಿಕೆ ನೀಡಿದ್ದೆವು. ಆದರೆ ನಮ್ಮೆಲ್ಲಾ ಅಭಿಮಾನಿ, ಹಿತೈಷಿಗಳ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಒತ್ತಾಯಕ್ಕೆ ಮಣಿದು ಈ ಹಿಂದಿನ ನಿರ್ಧಾರದಿಂದ ಹಿಂದೆ ಸರಿದು ಮತ್ತೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯುತ್ತೇವೆ" ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಭಾಗವತ ದಿವಾನ್ ಶಿವಶಂಕರ್ ಭಟ್, ಸತೀಶ್ ಪಟ್ಲ, ಮತ್ತಿತರರು ಉಪಸ್ಥಿತರಿದ್ದರು.
ಘಟನೆಯ ವಿವರ:
ಯಕ್ಷಗಾನ ’ನಾಟ್ಯ ವೈಭವ’ ಕಾರ್ಯಕ್ರಮದಲ್ಲಿ ಶೃಂಗಾರ ಸನ್ನಿವೇಶವೊಂದರಲ್ಲಿ ಸಿನಿಮೀಯ ಶೈಲಿಯ " ಲಿಪ್ ಲಾಕ್ " ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು ಮತ್ತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ
ಒಂದು ವರ್ಗದ ಕೆಂಗಣ್ಣಿಗೆ, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ಆರೋಪ ಹಾಗೂ ಸಮಜಾಯಿಸಿಗಳ ಮದ್ಯೆ, ಸನ್ನಿವೇಶದಲ್ಲಿ ಅಭಿನಯಿಸಿದ ಕಲಾವಿದರಾದ ರಾಕೇಶ್ ರೈ ಅಡ್ಕ ಮತ್ತು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ತಾವು ಇನ್ನು ಯಕ್ಷಗಾನದಿಂದ ವಿರಾಮಿಸುವ ಹೇಳಿಕೆ ನೀಡಿದ್ದರು