ಬಂಟ್ವಾಳ, ಆ 22(SM): ಬಂಟ್ವಾಳ ತಾಲೂಕು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದಲ್ಲಿ ನೆರೆ ಮನೆಯಿಂದ ಮತ್ತು ಸಂಬಂದಿಕರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವುಗೈಯುತ್ತಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೇರಮಜಲು ಗ್ರಾಮದ ಅಬ್ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ ಯಾನೆ ಜಡ್ಡು(32) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 134.35 ಗ್ರಾಂ ಚಿನ್ನಾಭರಣವನ್ನು ಆರೋಪಿ ಪ್ರಶಾಂತ್ ನಿಂದ ವಶಪಡಿಸಿಕೊಂಡಿಸಿದ್ದಾರೆ. ಆರೋಪಿಯು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದ ಮನೆಗೆ ಸ್ನೇಹಿತನಂತೆ ಮತ್ತು ಸಂಬಂಧಿಕನಂತೆ ಹೋಗಿ ಅವರ ಮನೆಯವರ ವಿಶ್ವಾಸ ಗಳಿಸಿದ್ದ. ಮನೆಯ ಬೀಗವನ್ನು ಇಡುವ ಸ್ಥಳವನ್ನು ನೋಡಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಬಂದು ಕೀಲಿ ಕೈ ಬಳಸಿ ಮನೆಯ ಬೀಗವನ್ನು ತೆರೆದು ಒಳಗೆ ಪ್ರವೇಶಿಸಿ ಚಿನ್ನಾಭರಣ ಕಳವುಗೈಯುತ್ತಿದ್ದ. ಬಳಿಕ ಕೀಲಿ ಕೈಯನ್ನು ಮತ್ತದೇ ಜಾಗದಲ್ಲಿರಿಸಿ ಯಾರಿಗೂ ಅನುಮಾನ ಬಾರದಂತೆ ವರ್ತಿಸುತ್ತಿದ್ದ ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ.
ಮೇರೆಮಜಲು ಗ್ರಾಮದ ಅಬ್ಬೆಟ್ಟು ರಮೇಶ್ ಪೂಜಾರಿ ಎಂಬವರ ಮನೆಯ ಹಿಂಬದಿಯ ಕಿಟಕಿಯ ರೀಪನ್ನು ತುಂಡರಿಸಿ ಒಳಗೆ ನುಗ್ಗಿ ಸುಮಾರು 3 ಗೋಲ್ಡ್ ಕಾಯಿನ್, 4 ಗ್ರಾಂನ ಬೆಂಡೋಲೆ, ನಗದು ಕಳವುಗೈದಿದ್ದ. 2 ವರ್ಷದ ಹಿಂದೆ ಅಬ್ಬೆಟ್ಟು ಹೊಸ ಹೊಕ್ಲು ರಮೇಶ ಎಂಬವರು ಮನೆಯ ಬೀಗದ ಕೀಯಿಂದ ಬೀಗವನ್ನು ತೆರೆದು ಮನೆಯ ಒಳಗೆ ಪ್ರವೇಶಿಸಿ ಕಪಾಟಿನ ಒಳಗೆ ಇಟ್ಟಿದ್ದ 52 ಗ್ರಾಂ. ಚಿನ್ನಾಭರಣ ನಗದು ಕಳವುಗೈದಿದ್ದ. ಅಬ್ಬೆಟ್ಟು ನಿವಾಸಿ ಹರಿಣಾಕ್ಷಿಯವರ ಮನೆಯಿಂದ 16 ಗ್ರಾಂ ಚಿನ್ನ, ಮೇರೆಮಜಲು ಗ್ರಾಮದ ಕಂಬಳಕೋಡಿ ಅಬ್ಬೆಟ್ಟು ಸುನೀತಾರವರ ಮನೆಯಿಂದ 20 ಗ್ರಾಂ ಚಿನ್ನಾಭರಣ ಹೀಗೆ ಹಲವು ಕಳ್ಳತನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ ಎನ್ನಲಾಗಿದೆ.