ಮಡಿಕೇರಿ, ಆ 23 (MSP): ಭಾರೀ ಮಳೆ ಹಾಗೂ ಭೂ ಕುಸಿತದ ಬಳಿಕ ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿದೆ. ಕಳೆದೆರಡು ದಿನಗಳಿಂದ ಮಳೆ ಸ್ವಲ್ಪ ವಿರಾಮ ನೀಡಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಪರಿಣಾಮ ಆ 23 ರ ಗುರುವಾರದಿಂದ ಶಾಲಾ- ಕಾಲೇಜುಗಳು ಪುನರಾರಂಭಗೊಳ್ಳುತ್ತಿದೆ. ಮಳೆಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದಿದ್ದ ಕೊಡಗಿನ ವಿದ್ಯಾರ್ಥಿಗಳು ಕಳೆದ 12 ದಿನಗಳಿಂದ ಶಾಲೆಯ ಕಾಲೇಜಿನ ಮೆಟ್ಟಿಲು ಹತ್ತಿರಲಿಲ್ಲ.
ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ತೀವ್ರ ಹಾನಿಯಾಗಿರುವ ಭಾಗದ ಸುಮಾರು 61 ಶಾಲೆಗಳನ್ನ ಹೊರತುಪಡಿಸಿ ಉಳಿದ ಕಡೆ ಶಾಲಾ ಕಾಲೇಜುಗಳು ಇಂದಿನಿಂದ ಪುನಾರಂಭಗೊಳ್ಳುತ್ತಿದೆ. ಇದರೊಂದಿಗೆ ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ. ಈ ಮಕ್ಕಳಿಗೆ ಐದು ಸಾವಿರ ಪುಸ್ತಕಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ.
ಇದಲ್ಲದೆ ಜಿಲ್ಲೆಯ ವಾತಾವರಣ ಸಹಜ ಸ್ಥಿತಿಯತ್ತ ಮರಳಲು , ಭೂ ಕುಸಿತದ ಮಣ್ಣುಗಳ ತೆರವು, ಸೇತುವೆ ಜೋಡಣೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇನ್ನು 10 ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿರುವ ಮಡಿಕೇರಿಯಲ್ಲಿ ಕರೆಂಟ್ ಕಂಬಗಳ ರಿಪೇರಿ ಕಾರ್ಯ ಪ್ರಾರಂಭವಾಗಿದೆ. ಇದಕ್ಕಾಗಿಯೇ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಭಾಗಗಳ ಸಿಬ್ಬಂದಿಗಳು ಕೊಡಗಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ಸಾರಿಗೆ ಸಂಪರ್ಕದ ಪುನರ್ ಸ್ಥಾಪನೆಗೆ ಲೋಕೋಪಯೋಗಿ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಂಚಾಯತ್ ರಾಜ್ ನ ಎಂಜಿನಿಯರಿಂಗ್ ವಿಭಾಗದ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ. ಭೂ ಕುಸಿತವಾದ ಸ್ಥಳದಲ್ಲಿ ರಕ್ಷಣಾ ತಡೆಗೋಡೆ, ಮರಳು ಚೀಲಗಳ ಮೂಲಕ ತಾತ್ಕಾಲಿಕ ಕ್ರಮಕ್ಕೆ ಸೂಚಿಸಲಾಗಿದೆ. ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲು ಮರಳು ಚೀಲಗಳನ್ನು ಬಳಸುವ ಮೂಲಕ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಬಂಧಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.