ಉಡುಪಿ, ಆ 23 (MSP): ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಆ.23ರ ಬುಧವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಭೇಟಿ ಮಾಡಿ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿದರು. ಮೊದಲು ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲ ಅವರು ಮೃತ ಕೀರ್ತನ್ ಅವರ ತಂದೆ ತಾಯಿ ಹಾಗೂ ಬಂಧುಗಳಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಸಚಿವರೇ ಗದ್ಗದಿತರಾದರು.
ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಂತ್ವಾನ ಹೇಳಿದರು. ಇಬ್ಬರೂ ಮೃತರು ಯುವಕರಾಗಿದ್ದು, , ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು, ಆದರೆ ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ. ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯುವಕರ ಸಾವು ಮೃತ ಕುಟುಂಬಕ್ಕೆ ತುಂಬಲಾರದ ನಷ್ಟ. ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಈ ಯುವಕರ ಸಾವು, ಮನೆಯ ಆಧಾರಸ್ಥಂಬ ಕಳಚಿಬಿದ್ದಂತಾಗಿದೆ. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಂ ಇಲಾಖೆಯ ವತಿಯಿಂದ ತಕ್ಷಣ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಮೃತ ಕುಟುಂಬಸ್ಥರ ಭೇಟಿಯ ಬಳಿಕ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ ಉಪಸ್ಥಿತರಿದ್ದರು.
ಇದೇ ವೇಳೆ ಸಚಿವೆ ಜನ ವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿ ಇರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವು ಗೊಳಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.