ಸುಳ್ಯ, ಆ 23(SM): ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿರುವ ಜೋಡುಪಾಲದ ಮೊಣ್ಣಂಗೇರಿ ಪ್ರದೇಶದ ನೂರಾರು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ನಿರಾಶ್ರಿತರನ್ನು ಆಗಸ್ಟ್ ೨೩ರ ಗುರುವಾರದಂದು ತಮ್ಮ ಜಮೀನು ಹಾಗೂ ಮನೆಗಳ ವೀಕ್ಷಣೆಗೆಂದು ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಾಪಕವಾಗಿ ಹಾನಿಯಾಗಿರುವುದು ತಿಳಿದು ಬಂದಿದೆ. ಇದರಿಂದಾಗಿ ಈ ಭಾಗದ ಮಂದಿ ನಿರಾಶ್ರಿತ ಕೇಂದ್ರದಲ್ಲೇ ಮತ್ತಷ್ಟು ದಿನ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಆಗಸ್ಟ್ ೨೨ರ ಬುಧವಾರ ಜೋಡುಪಾಲ ಭಾಗಕ್ಕೆ ಇಸ್ರೋ ವಿಜ್ಞಾನನಿಗಳು ಭೇಟಿ ನೀಡಿ ಅಧ್ಯಯನ ನಡೆಸಿದ್ದರು. ಜೋಡುಪಾಲ, ಮೊಣ್ಣಂಗೇರಿ ಪ್ರದೇಶಗಳು ಸದ್ಯದ ಸಮಯದಲ್ಲಿ ವಾಸಕ್ಕೆ ಅಯೋಗ್ಯ ಪ್ರದೇಶ ಎಂದು ವರದಿಯನ್ನು ನೀಡಿದ್ದರು. ದೇವರ ಕೊಲ್ಲಿ, ಅರೆಕಲ್ಲು ಭಾಗ ವಾಸಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದ್ದರು. ಈ ಕಾರಣದಿಂದ ದೇವರಕೊಲ್ಲಿ, ಅರೆಕಲ್ಲು ಭಾಗದ ಜನರನನ್ನು ಸಹಾಯ ಕೇಂದ್ರದಿಂದ ಇಂದು ಅವರ ಮನೆಗಳಿಗೆ ಕಳುಹಿಸಲಾಗಿದೆ. ನೆರೆ ಸಂದರ್ಭ ಈ ಗ್ರಾಮಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಹಿನ್ನೆಲೆ ಅಧ್ಯಯನ ನಡೆಸಿದ ತಂಡ ದೇವರಕೊಲ್ಲಿ, ಅರೆಕಲ್ಲು ಭಾಗದಲ್ಲಿ ಜನ ವಸತಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದರು.
ಈ ಎರಡು ಭಾಗದ ಜನರನ್ನು ಹೊರತು ಪಡಿಸಿ ಉಳಿದ ಭಾಗದ ಜನರ ಮನೆ, ತೋಟ, ಜಮೀನಿಗೆ ಅಪಾರ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬದುಕು ನಿರಾಶ್ರಿತರ ಕೇಂದ್ರವನ್ನೇ ಅವಲಂಬಿತವಾಗಿದೆ.