ಕಾರ್ಕಳ, ಮಾ.15 (DaijiworldNews/MB) : ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗದಳದ ಕಾರ್ಯಕರ್ತರ ನಡುವೆ ಮಾರ್ಚ್ 14 ರ ಭಾನುವಾರದಂದು ಘರ್ಷಣೆ ನಡೆದಿದ್ದು ಈ ಸಂದರ್ಭ ಓರ್ವ ವ್ಯಕ್ತಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲ್ಲೂಕಿನ ನಿಟ್ಟೆ ಗ್ರಾಮದ ನಿವಾಸಿ ಅನಿಲ್ ಪೂಜಾರಿ ಗಾಯಗೊಂಡ ವ್ಯಕ್ತಿ. ಭಜರಂಗದಳದ ಕಾರ್ಯಕರ್ತರಾದ ಸುನಿಲ್, ಸುಧೀರ್, ಶರತ್, ಪ್ರಸಾದ್ ಮತ್ತು ಜಗದೀಶ್ ಅವರು ಅನಿಲ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕಾರ್ಯಕರ್ತರು ಭಾನುವಾರ ತಡರಾತ್ರಿ ಅನಿಲ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅನಿಲ್ ತಲೆ ಮತ್ತು ಮುಖಕ್ಕೆ ಗಾಯಗಳಾಗಿದ್ದು ಅವರು ಕೂಡಲೇ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ನಡೆಸುವವರನ್ನು ತಡೆಯಲು ಪ್ರಯತ್ನಿಸಿದ ಅನಿಲ್ ತಾಯಿ ಕೂಡ ಗಾಯಗೊಂಡಿದ್ದಾರೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ದೂರು ದಾಖಲಾಗಿದೆ. ಈ ಎರಡು ಗ್ಯಾಂಗ್ ನಡುವೆ ಭಿನ್ನಾಭಿಪ್ರಾಯಗಳಿದ್ದು ಕೆಲವು ಆಸ್ತಿ ವಿಚಾರದಲ್ಲಿ ಅನಿಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ಬಜರಂಗದಲ್ಲಿದ್ದ ಅನಿಲ್ ಆ ಸಂಘಟನೆಯನ್ನು ತೊರೆದು ಹಿಂದೂ ಜಾಗರಣ ವೇದಿಕೆ ಸಂಘಟನೆಗೆ ಸೇರ್ಪಡೆಯಾಗಿರುವುದು ದಾಳಿಗೆ ಕಾರಣ ಎಂದು ಕೂಡಾ ಹೇಳಲಾಗುತ್ತದೆ. ಇದಕ್ಕೂ ಮೊದಲು ಗಾಯಗೊಂಡ ಅನಿಲ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಮತ್ತೊಂದು ಸಮುದಾಯಕ್ಕೆ ಸೇರಿದ ಯುವಕನನ್ನು ಪೊಲೀಸರಿಗೆ ಒಪ್ಪಿಸುವ ವಿಷಯದಲ್ಲಿ ಹಿಂಜಾವೇ ಹಾಗೂ ಬಜರಂಗದಳ ನಡುವೆ ದ್ವೇಷ ಬೆಳೆದಿದೆ. ಎರಡೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ತಾವು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಯುವಕನನ್ನು ಪೊಲೀಸರಿಗೆ ಒಪ್ಪಿಸುವ ವಿಚಾರವು ಎರಡು ಸಂಘಟನೆಯ ಪ್ರತಿಷ್ಠೆಯ ವಿಷಯವಾಗಿ ತಿರುಗಿದ್ದು ಈ ವಿಚಾರವು ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.