ಉಡುಪಿ, ಮಾ.15 (DaijiworldNews/PY): "ಆರ್ಟಿಐ ಕಾರ್ಯಕರ್ತ ಶಂಕರ್ ಶಾಂತಿಯವರ ಮೇಲಿನ ಹಲ್ಲೆ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ" ಎಂದು ಶಂಕರ್ ಶಾಂತಿಯವರ ತಾಯಿಯ ಸಹೋದರಿಯರ ಮಕ್ಕಳಾದ ವಿಜಯ್ ಪೂಜಾರಿ, ಸರ್ವೋತ್ತಮ ಪೂಜಾರಿ, ಮತ್ತು ಅಜಿತ್ ಪೂಜಾರಿ ಆರೋಪಿಸಿದ್ದಾರೆ.


ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸರ್ವೋತ್ತಮ ಪೂಜಾರಿ ಅವರು, "ಶಂಕರ ಶಾಂತಿ ಎನ್ನುವವರು ನನ್ನ ತಾಯಿಯ ಸಹೋದರಿಯ ಮಗ. ಬಾರಕೂರರಿನ ಹನಹಳ್ಳಿ ಗ್ರಾಮದಲ್ಲಿ ಸುಮಾರು 3 ಎಕರೆ ನನ್ನ ಅಜ್ಜನ ಆಸ್ತಿ ಇದ್ದು, ತಾಯಿಯ ಸಹೋದರ, ಸಹೋದರಿಯರು ಆಸ್ತಿ ವಿಷಯದಲ್ಲಿ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇರುವಾಗಲೇ, ನಮಗೆ ಯಾರಿಗೂ ಈ ಜಾಗಕ್ಕೆ ಹೋಗಬಾರದೆಂದು ನನ್ನ ಮೇಲೆ ಹಾಗೂ ನನ್ನ ಚಿಕ್ಕಮ್ಮ ಚಿಕ್ಕಮ್ಮ, ಅಣ್ಣ, ಚಿಕ್ಕಮ್ಮನ ಮಕ್ಕಳ ಮೇಲೆ 2011 ಮತ್ತು 2012 ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಇಲ್ಲಿಯವರೆಗೂ ಕೋರ್ಟ್ ಕಛೇರಿಗೆ ಅಲೆದಾಡುವಂತೆ ಮಾಡಿದ್ದಾನೆ. ಈ ಪೂರ್ಣ 3 ಎಕರೆ ಜಾಗ, ಮನೆ, ತೆಂಗಿನ ತೋಟ ಮುಂತಾದವುಗಳನ್ನು ಶಂಕರ ಶಾಂತಿ ಮತ್ತು ಅವನ ತಾಯಿ ಅನುಭವಿಸುತ್ತಿದ್ದಾರೆ. ವಿನಾಃ ಕಾರಣ ಶಂಕರ ಶಾಂತಿ ಕಾನೂನಿನ ದುರುಪಯೋಗ ಪಡಿಸಿಕೊಂಡು 2011 ಹಾಗೂ 2012 ರಲ್ಲಿ ಸುಳ್ಳು ಕೇಸ್ ದಾಖಲಿಸಿ ನಮ್ಮ ಮೇಲೆ 2 ಕ್ರಿಮಿನಲ್ ಮೊಕದ್ದಮೆ ಹೂಡಿ ನಮ್ಮ ವಿದ್ಯಾಭ್ಯಾಸ, ಸರಕಾರಿ ಉದ್ಯೋಗ, ಹೊರದೇಶಕ್ಕೆ ಹೋಗಿ ದುಡಿಯುವ ಹಾಗೂ ನಮೆಲ್ಲರ ಅಮೂಲ್ಯವಾದ ಸಮಯ, ಸಂಪಾದನೆ, ನೆಮ್ಮದಿಯನ್ನು ಹಾಳು ಮಾಡಿ ಇಡೀ ನಮ್ಮ ಕುಟುಂಬದ ಅಭಿವೃದ್ಧಿ ಹಾಳು ಮಾಡಿದ್ದಾನೆ" ಎಂದರು.
"ಈ ಹಿಂದಿನ ದ್ವೇಷದಿಂದ ಫೆ.21ರಂದು ನಡೆದಿರುವ ಪ್ರಕರಣದಲ್ಲಿ ಸಹೋದರರಾದ ಸುರೇಶ ಪೂಜಾರಿ, ವಿಜಯ ಪೂಜಾರಿ, ಸರ್ವೋತ್ತಮ ಪೂಜಾರಿ ಹಾಗೂ ಅಜಿತ್ ಪೂಜಾರಿ ಅವರ ಹೆಸರು ಸೇರಿಸಿರುವುದು ದುರುದ್ದೇಶದಿಂದ ಕೂಡಿದೆ. ನಾವು ನಿರಪರಾಧಿಗಳು, ಈ ಪ್ರಕರಣದಲ್ಲಿ ನಾವು ಭಾಗಿಯಾಗಿ ಇಲ್ಲದಿರುವುದಕ್ಕೆ ನಮ್ಮಲಿ ಸಾಕ್ಷ್ಯಾಧಾರಗಳಿವೆ. ಅವುಗಳನ್ನು ನಾವು ಹಾಜರುಪಡಿಸುತ್ತೇವೆ" ಎಂದರು.
"ಮೊನ್ನೆ ನಡೆದ ಘಟನೆಯಲ್ಲಿ ನಿರಪರಾಧಿಗಳಾದ ನಮ್ಮ ಹೆಸರು ಬಂದಿರುವ ಬಗ್ಗೆ ಬಿಲ್ಲವ ಯುವ ಸಂಘಟನೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅವರ ಗಮನಕ್ಕೆ ತಂದಿದ್ದೇವೆ. ಆದರೆ ನಮ್ಮ ಮನವಿಗೆ ಪ್ರವೀಣ್ ಪೂಜಾರಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ" ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ವಿಜಯ್ ಪೂಜಾರಿ, ಸರ್ವೋತ್ತಮ ಪೂಜಾರಿ, ಮತ್ತು ಅಜಿತ್ ಪೂಜಾರಿ ಉಪಸ್ಥಿತರಿದ್ದರು.