ಉಡುಪಿ, ಮಾ.15 (DaijiworldNews/PY): "ಪರಿಶಿಷ್ಠ ಜಾತಿ ವರ್ಗಗಳ ಮೀಸಲಾತಿ ಸಂವಿಧಾನ ಬದ್ದವಾಗಿದೆ. ಈಗ ಯಾರು ಹೋರಾಟ ಮಾಡಿ ತಮಗೂ ಮೀಸಲಾತಿಯನ್ನು ಕೇಳುತ್ತಿದ್ದಾರೋ ಅದು ಕೇವಲ ಶಾಸನಬದ್ದ. ಮೀಸಲಾತಿ ಕಲ್ಪಿಸಿಕೊಡಬೇಕು ಎನ್ನುವ ಉದ್ದೇಶಕ್ಕೆ ಶಾಸನವನ್ನು ತಿದ್ದಿ ಕೊಟ್ಟ ಅವಕಾಶ. ಎರಡೂ ಬೇರೆ ಬೇರೆ. ಈಗ ಯಾವ ಜಾತಿಯೂ ಮೀಸಲಾತಿಯಿಂದ ವಂಚಿತರಾಗಿಲ್ಲ. ಎಲ್ಲಾ ಜಾತಿ ವರ್ಗಗಳಿಗೆ ಮೀಸಲಾತಿ ಸಿಕ್ಕಮೇಲೆ ಆ ಮೀಸಲಾತಿಯವನ್ನು ಬಿಟ್ಟು ಬೇರೆ ಮೀಸಲಾತಿಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಅರ್ಥವೇ ಇಲ್ಲ. ಈಗಾಗಲೇ ಮೀಸಲಾತಿ ಕೊಡಲಾಗಿದೆ. ಈಗಾಗಲೇ ಸರಕಾರ ಆದೇಶ ಹೊರಡಿಸಿ ಸಮಿತಿ ರಚನೆ ಮಾಡಿದೆ. ಮುಂದೆ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ರಾಜ್ಯ ಎಸ್ ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣ್ ಸ್ವಾಮಿಯವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.




ಅವರು ಸೋಮವಾರ ಜಿಲ್ಲಾ ಬಿಜೆಪಿ ಕಛೇರಿ ಕಡಿಯಾಳಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಕಾಂಗ್ರೆಸ್ ಹಿಂದಿನಿಂದಲೂ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಾ ಬಂದಿದೆ. ದಲಿತರೆಂದರೆ ಕಾಂಗ್ರೆಸ್ನ ಓಟ್ ಬ್ಯಾಂಕ್. ಅದನ್ನ ಕಳೆದು ಕೊಳ್ಳಲು ಇಷ್ಟ ಇಲ್ಲ. ಆ ಓಟುಗಳನ್ನು ಉಳಿಸಿಕೊಳ್ಳಲು ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ದಲಿತ ವಿರೋಧಿ ಮತ್ತು ಸಂವಿಧಾನ ತೆಗೆದು ಬಿಡುತ್ತಾರೆ, ಮೀಸಲಾತಿ ರದ್ದಾಗುತ್ತದೆ. ಅಂಬೇಡ್ಕರ್ ಅವರನ್ನು ವಿರೋಧಿಸುತ್ತಾರೆ. ಈಗ ದಲಿತರೆಲ್ಲ ಸೇರಿ ಕಾಂಗ್ರೆಸ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಾ ಇದ್ದಾರೆ. ಈಗ ದಲಿತರಿಗೂ ಕಾಂಗ್ರೆಸ್ ಏನು ಬಿಜೆಪಿ ಏನು ಎಂಬುದು ಅರ್ಥವಾಗಿದೆ, ಈಗ ದಲಿತರನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷ, ಇದೀಗ ವಿರೋಧ ಪಕ್ಷದ ಸ್ಥಾನವನ್ನು ಗಿಟ್ಟಿಸಿ ಕೊಳ್ಳಲಾರದ ಅವಸಾನ ಸ್ಥಿತಿಯಲ್ಲಿದೆ"ಎಂದು ಟೀಕಿಸಿದರು.
"ಕಳೆದ 70 ವರ್ಷಗಳಿಂದ ದಲಿತರು ಮುಖ್ಯಮಂತ್ರಿ ಸ್ಥಾನಕೊಡಿ ಎಂದು ಬೇಡಿಕೆ ಇಟ್ಟರು ಒಮ್ಮೆಯೂ ಅವಕಾಶ ಕೊಡಲಿಲ್ಲ. ಕಳೆದ ಬಾರಿ ಸಮ್ಮಿಶ್ರ ಸರಕಾರ ಬಂದಾಗ ಕಾಟಚಾರಕ್ಕಾಗಿ ಉಪಮುಖ್ಯ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಈಗ ಅವರು ಕಾಂಗ್ರೆಸ್ಸನ್ನು ತೊರೆದು ಬಿಜೆಪಿ ತೆಕ್ಕೆಗೆ ಬರುತ್ತಿದ್ದಾರೆ. ಬರುವವರೂ ಇದ್ದಾರೆ" ಎಂದರು.
"ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷನೇ ಆರೋಪಿಗೆ ಕ್ಲೀನ್ ಚಿಟ್ ಕೊಡುತ್ತಾರೆ. ಕೆಪಿಸಿಸಿ ಮತ್ತು ಸಿದ್ದರಾಮಯ್ಯನವರ ನಡುವಿನ ಬಿರುಕನ್ನು ಮುಚ್ಚಿ ಹಾಕಲು ಇಂತಹ ಹೋರಾಟ ನಡೆಸುತ್ತಿದೆ. ಇದರಿಂದ ಯಾರಿಗೂ ಸಂಗಮೇಶ್ ಅವರ ಸಂಘ ಕಾಂಗ್ರೆಸ್ಗೆ ಮುಖಭಂಗ ಸದ್ಯಕ್ಕೆ ಆಗಲಿದೆ. ಇದರಿಂದ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ದಲಿತ ಸಂಘಟನೆ ಈಗ ಬಿಜೆಪಿ ಜೊತೆಗಿದೆ. ಮುಸಲ್ಮಾನ್ರನ್ನು ಈಗ ಕಾಂಗ್ರೆಸ್ ಹಾಳು ಮಾಡಿದೆ. ಓರ್ವ ಮುಸಲ್ಮಾನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿಲ್ಲ. ಪಕ್ಷದೊಳಗಿನ ನಾಯಕರೇ ಮೂದಲಿಸುತ್ತಾರೆ. ಕಾಂಗ್ರೆಸ್ ಈಗ ಒಡೆದ ಮನೆ, ಮೂರು ಬಾಗಿಲಾಗಿದೆ. ಮುಂದೆಯೂ ಬಿಜೆಪಿ 150 ಸ್ಥಾನಗಳನ್ನು ಗೆದ್ದು ಸರಕಾರವನ್ನು ಇನ್ನಷ್ಟು ಶಕ್ತಿಯುತವಾಗಿ ಮಾಡಲಿದೆ" ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿನಕರ್ ಬಾಬು, ಪ್ರಧಾನ ಕಾರ್ಯದರ್ಶಿ, ಎಸ್ಸಿ ಮೋರ್ಚಾ, ನಾಗೇಶ್ ದೇವನಹಳ್ಳಿ, ಕೋಶಾಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು