ಕುಂದಾಪುರ, ಮಾ. 15 (DaijiworldNews/SM): ಆಸ್ತಿ ತೆರಿಗೆ ಸುಧಾರಣೆ ತರುವ ನಿಟ್ಟಿನಲ್ಲಿ ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಅನುಸರಿಸಿ ತೆರಿಗೆ ಹೆಚ್ಚಳದ ವಿಷಯದಲ್ಲಿ ವಿಶೇಷ ಸಭೆ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಕೊರೋನಾ ಸಂಕಷ್ಟದ ನಡುವೆ ಜನರಿಗೆ ಹೊರೆಯಾಗದಂತೆ, ಸರ್ಕಾರದ ಆದೇಶವನ್ನೂ ಉಲ್ಲಂಘಿಸದೆ ಆಸ್ತಿ ತೆರಿಗೆಯನ್ನು 2021-22ನೇ ಸಾಲಿಗೆ 0.2ಯಿಂದ 1.5 ತನಕ ಹೆಚ್ಚಳ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಇದರಿಂದ ಚಾಲ್ತಿಯಿರುವ ತೆರಿಗೆಯಲ್ಲಿ ವಾಸ್ತವ್ಯ ಮನೆಗಳಿಗೆ, ಜಾಗಗಳಿಗೆ ಗರಿಷ್ಠ 50-60 ರೂಪಾಯಿ ತನಕ ಹೆಚ್ಚಳವಾಗಲಿದೆ.

ವಿಪಕ್ಷ ಸದಸ್ಯರ ಗೈರು ಹಾಜರಾತಿಯ ನಡುವೆಯೂ ನಿರ್ಣಯ ಅಂಗೀಕರಿಸಲಾಯಿತು. ಸಭೆಯ ಆರಂಭದಲ್ಲಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸರ್ಕಾರದ ಸುತ್ತೋಲೆ, ಪುರಸಭೆಯ ಜವಾಬ್ದಾರಿ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪುರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ಕನಿಷ್ಠ ಶೇ.0.5ರಿಂದ ಗರಿಷ್ಠ ಶೇ.3ರ ಮಿತಿಯಲ್ಲಿ ತೆರಿಗೆ ನಿಗಧಿಪಡಿಸಬಹುದಾಗಿದೆ. ವಸತಿ, ವಾಣಿಜ್ಯೇತರ ಕಟ್ಟಡಗಳಿಗೆ ಕನಿಷ್ಠ ಶೇ.0.2ರಿಂದ ಗರಿಷ್ಠ ಶೇ.1.5ರ ಮಿತಿಯಲ್ಲಿ ತೆರಿಗೆ ನಿಗಧಿಪಡಿಸಬಹುದಾಗಿದೆ. ಖಾಲಿ ಭೂಮಿಗೆ ಕನಿಷ್ಠ ಶೇ.0.2ರಿಂದ ಗರಿಷ್ಠ ಶೇ.0.5ರ ಮಿತಿಯಲ್ಲಿ ನಿವೇಶನದ ಮೂಲ ಬೆಲೆಯ ಮೇಲೆ ಆಸ್ತಿ ತೆರಿಗೆ ನಿಗಧಿಪಡಿಸಬಹುದಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 48 ರಸ್ತೆಗಳಿದ್ದು, ಅ ಪ್ರದೇಶದ ಮೌಲ್ಯ ಆಧರಿಸಿ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದರು.
ಸದಸ್ಯ ಮೋಹನದಾಸ ಶೆಣೈ ಮಾತನಾಡಿ, ಆಸ್ತಿ ತೆರಿಗೆ ಪರಿಷ್ಕರಣೆಯ ಬಗ್ಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಮಾಡುವುದರೊಳಗೆ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ವಿಷಯ ಮಂಡನೆಗೂ ಮೊದಲೆ ಅವರು ಸಭಾತ್ಯಾಗ ಮಾಡಿದರು. ಆ ಹಿನ್ನೆಲೆಯಲ್ಲಿ ಈಗ ವಿಶೇಷ ಸಭೆ ಕರೆದರೂ ಕೂಡಾ ಅವರು ಸಭೆ ಬಹಿಷ್ಕಾರ ಮಾಡಿದ್ದಾರೆ. ಕೊರೋನಾ ಕಾಲಘಟ್ಟದಲ್ಲಿ ಜನರ ಮೇಲೆ ಭಾರ ಹಾಕುವುದು ನಮಗೂ ಕೂಡಾ ಇಷ್ಟವಿಲ್ಲ. ಈ ವಿಷಯವನ್ನು ಮನವರಿಕೆ ಮಾಡಿಕೊಂಡು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಇತ್ತು ಎಂದು ಹೇಳಿದ ಅವರು, ಕೊರೋನಾದಿಂದ ಜನಜೀವನ ಇನ್ನೂ ಕೂಡಾ ಸುಧಾರಿಸಿಲ್ಲ, ಮತ್ತೆ ತೆರಿಗೆ ಏರಿಕೆ ಮಾಡಿದರೆ ಜನವಿರೋದ ವ್ಯಕ್ತವಾಗುವುದು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದರೆ ಮುಂದೆ ಅನುದಾನಕ್ಕೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಬೇಕಿದೆ ಎಂದರು.
ಸದಸ್ಯ ಗಿರೀಶ್ ಮಾತನಾಡಿ, ವಿಪಕ್ಷ ಸದಸ್ಯರು ಇವತ್ತು ಸಭೆಗೆ ಭಾಗವಹಿಸಿ ವಿಷಯ ಚರ್ಚಿಸಬೇಕಿತ್ತು. ಆದರೆ ಅವರು ಫಲಾಯನವಾದ ಮಾಡಿದ್ದಾರೆ. ಸಭೆಯನ್ನು ಬಹಿಷ್ಕಾರ ಮಾಡಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದರು. ಜನಸಾಮಾನ್ಯರಿಗೆ ಹೊರೆಯಾಗದಂತೆ, ಪುರಸಭೆಯ ಆದಾಯ ಕಮ್ಮಿಯಗದಂತೆ ಸಿದ್ಧಪಡಿಸಲಾದ ಯೋಜನೆಯನ್ನು ಸಭೆಯಲ್ಲಿ ಅಧಿಕಾರಿಗಳು ಪ್ರಸ್ತುತ ಪಡಿಸಿದರು. ಪ್ರತಿವಾರ್ಡ್ನಂತೆ ಪರಿಷ್ಕರಿಸಲಾದ ತೆರಿಗೆಯ ಮಾದರಿಯನ್ನು ಪ್ರದರ್ಶಿಸಲಾಯಿತು. ವಾಸ್ತವ್ಯದ ಮನೆ, ಮಹಡಿ, ಮಾರ್ಬಲ್, ಗ್ರಾನೈಟ್, ವಿಟ್ರಪ್ಯಾಡ್, ಹಂಚು, ಕರಿಹಂಚು ಹೀಗೆ ಮನೆಗಳ ಆಧಾರ, ವಿಸ್ತೀರ್ಣದ ಆಧಾರದಲ್ಲಿ ಶೇ. 0.2ಯಿಂದ ಶೇ.1.5 ಹೆಚ್ಚಳ ಮಾಡಿದರೆ ಗರಿಷ್ಠ 50 ರೂಪಾಯಿ ಹೆಚ್ಚಳವಾಗಬಹುದು ಎಂದು ಮಾದರಿಯನ್ನು ಪ್ರಾಜೆಕ್ಟರ್ ಮೂಲಕ ತೋರಿಸಿ ವಿವರಿಸಲಾಯಿತು.