ಮಂಗಳೂರು, ಮಾ.16 (DaijiworldNews/MB) : ನಗರದ ಅಪಾರ್ಟ್ಮೆಂಟ್ನಲ್ಲಿ ಹಾಸನದ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ವಿಚಾರಣೆ ನಡೆಸಲೆಂದು ತೆರಳಿದ ಸಂದರ್ಭ ವಕೀಲರೊಬ್ಬರು ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.

ಹಾಸನ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ದೂರುದಾರರು ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸಿಕ್ವೇರ್ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ಗೆ ತಪಾಸಣೆ ನಡೆಸಲು ಹೋಗಿದ್ದರು.
ಮಹಿಳಾ ಇನ್ಸ್ಪೆಕ್ಟರ್ ಅವರೊಂದಿಗೆ ಮಂಗಳೂರು ಪೂರ್ವ ಠಾಣಾ ಹೊಯ್ಸಳ-2 ಕರ್ತವ್ಯದ ಮಹೆಚ್ ಸಿ ಚಂದ್ರಾವತಿ ಹಾಗೂ ಎಸಿಪಿ ಈರಣ್ಣ, ದೂರುದಾರರಾದ ಜಾಸ್ಮಿನ್ ರೋಡ್ರಿಗಸ್, ಆಕೆಯ ತಂದೆ ಪೆಲಿಕ್ಸ್ ರೋಡ್ರಿಗಸ್ ಹಾಗೂ ಸಾಕ್ಷಿಗಳಾದ ಎವ್ರೀಸ್ ರೋಡ್ರಿಗಸ್ ಹಾಗೂ ಪ್ರಮೋದ್ ಇದ್ದರು.
ಮಹಿಳಾ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಕೀಲ ಪ್ರವೀಣ್ ಪಿಂಟೋ ಅವರು ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸಿಕ್ವೇರ್, ಅವರ ತಾಯಿ ಐರಿನ್ ಸಿಕ್ವೇರಾ ಹಾಗೂ ಮರ್ವಿನ್ ಜರಾರ್ಡ್ ಅವರ ಪರ ವಕೀಲ ಪ್ರವೀಣ್ ಪಿಂಟೋ ಸಾರ್ವಜನಿಕರ ಮುಂದೆ ಅವಾಚ್ಯ ಪದ ಬಳಸಿ ನಿಂದಿಸಿದ್ದು ಮಾತ್ರವಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.