ಕುಂದಾಪುರ, ಆ 24(SM): ಪುರಸಭೆಯ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಭಾರತೀಯ ಜನತಾ ಪಾರ್ಟಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಕುಂದಾಪುರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್ ಕಾವೇರಿಯನ್ನು ಅಮಾನತು ಮಾಡಲಾಗಿದೆ. ಬಿಜೆಪಿಯಿಂದ ಇನ್ನು ಮುಂದಿನ ಆರು ವರ್ಷಗಳ ತನಕ ರಾಜೇಶ್ ಕಾವೇರಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿ ಪ್ರಕಟಣೆ ತಿಳಿಸಿದೆ.
ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಿಂದ ಹೊರನಡೆದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಸಂದರ್ಭ ಬಿಜೆಪಿಯಲ್ಲಿ ಉಳಿದಿದ್ದವರಲ್ಲಿ ಕಿಶೋರ್ ಕುಮಾರ್ ಹಾಗೂ ರಾಜೇಶ್ ಕಾವೇರಿ ಪ್ರಮುಖರಾಗಿದ್ದರು. ಕೊನೆಗೆ ಕಿಶೋರ್ ಕುಮಾರ್ ಬಿಜೆಪಿಯಿಂದ ವಿಧಾನಸಭಾ ಅಭ್ಯರ್ಥಿಯಾಗಿದ್ದಾಗಲೂ ರಾಜೆಶ್ ಕಾವೇರಿ ಪಕ್ಷದಲ್ಲಿಯೇ ಉಳಿದು ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಆದರೆ ನಂತರದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಜಿಲ್ಲಾ ಮುಖಂಡರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಹಾಲಾಡಿ ಬಣಕ್ಕೆ ಮಣೆ ಹಾಕಿದಾಗ ರಾಜೇಶ್ ಕಾವೇರಿ ಹಾಗೂ ಕಿಶೋರ್ ನೇತೃತ್ವದ ಮೂಲ ಬಿಜೆಪಿ ಬಣ ವಿರೋಧಿಸಿತ್ತು. ಇದೀಗ ಕಳೆದ ಮೇ ತಿಂಗಳಲಿನಲ್ಲಿ ನಡೆದ ಚುನಾವಣೆಯಲ್ಲಿ ಹಾಲಾಡಿಗೆ ಸೀಟು ನೀಡುವ ಮೂಲಕ ರಾಜೇಶ್ ಕಾವೇರಿ ಬಣವನ್ನು ಜಿಲ್ಲಾ ಬಿಜೆಪಿ ಸಂಪೂರ್ಣ ನಿರ್ಲಕ್ಷ್ಯ ಮಾಡಿತ್ತು. ಇದರಿಂದಾಗಿ ಕುಂದಾಪುರದ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು.
ಕಳೆದ ಪುರಸಭೆಯ ಚುನಾವಣೆಯ ಬಳಿಕ ಪುರಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುವ ಸಂಭವವಿದ್ದಾಗ ರಾಜೇಶ್ ಕಾವೇರಿ ಒಳ ರಾಜಕೀಯದ ಮೂಲಕ ಜಯಪ್ರಕಾಶ್ ಹೆಗ್ಡೆ ಬೆಂಬಲಿತ ಕಾಂಗ್ರೆಸ್ ಸದಸ್ಯರನ್ನು ಬಂಡಾಯ ಎಬ್ಬಿಸುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ್ದರು. ಆ ಮೂಲಕ ವಸಂತಿ ಸಾರಂಗ ಅಧ್ಯಕ್ಷೆಯಾಗಿ ರಾಜೇಶ್ ಕಾವೇರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಮೀಸಲಾತಿ ಬದಲಾದ ಹಿನ್ನೆಲೆಯಲ್ಲಿ ಸೆಂಟ್ರಲ್ ವಾರ್ಡಿನಿಂದ ರಾಜೇಶ್ ಕಾವೇರಿ ಆಕಾಂಕ್ಷಿಯಾಗಿದ್ದರು. ಆದರೆ ಈ ಹಿಂದೆ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ್ದ ಮಾಜೀ ಅಧ್ಯಕ್ಷ ಮೋಹನದಾಸ ಶೆಣೈ ಕೂಡಾ ಈ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿದ್ದರು. ಆದರೆ ಮೋಹನದಾಸ ಶೆಣೈಗೆ ಪಕ್ಷ ಮಣೆ ಹಾಕಿರುವುದರಿಂದ ಪಕ್ಷೇತರರಾಗಿ ಸ್ಪರ್ಧಿಸಲು ರಾಜೇಶ್ ಮುಂದಾಗಿದ್ದರು. ಈ ಹಿನ್ನೆಲೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಪಕ್ಷದಿಂದ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ಕಾವೇರಿ, “ಈ ಬಗ್ಗೆ ಯಾವುದೇ ಅಧಿಕೃತ ಪತ್ರ ತಲುಪಿಲ್ಲ. ಜಾಲತಾಣಗಳಲ್ಲಿ ಬಂದಿರುವುದು ನೋಡಿ ತಿಳಿದಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮಿಸ್ ಕಾಲ್ ಅಭಿಯಾನದಲ್ಲಿ ನಾನು ಸದಸ್ಯತ್ವ ಹೊಂದಿದ್ದು, ನನ್ನ ಸದಸ್ಯತ್ವ ರದ್ದು ಮಾಡುವ ಅಧಿಕಾರ ರಾಷ್ಟೀಯ ನಾಯಕರಿಗೆ ಮಾತ್ರ ಇದೆ. ಇದೆಲ್ಲದಕ್ಕೂ ಚುನಾವಣೆ ಬಳಿಕ ಉತ್ತರ ನೀಡುತ್ತೇನೆ” ಎಂದಿದ್ದಾರೆ.