ಉಡುಪಿ, ಆ 24(SS): ಮಹಾಮಳೆಯಿಂದ ಅಕ್ಷರಶಃ ನಲುಗಿ ಹೋಗಿದ್ದ ಕೊಡಗು ಜಿಲ್ಲೆ ಮತ್ತು ಸುಳ್ಯದಲ್ಲಿ ಇದೀಗ ಮಳೆಯ ಭೀಕರತೆ ಸ್ಪಲ್ಪ ತಗ್ಗಿರುವುದರಿಂದ ಪರಿಹಾರ ಕಾರ್ಯಗಳು ಚುರುಕುಗೊಂಡಿವೆ.
ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ನೋವಿನ ಜೊತೆ ಸಹೃದಯಿಗಳು ಸ್ಪಂದಿಸುತ್ತಿದ್ದಾರೆ. ಈ ನಡುವೆ ಜಲಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್ ವತಿಯಿಂದ ಶ್ರೀ ವಿಶ್ವೇಶ ತೀರ್ಥರು ಸುಮಾರು 10 ಲಕ್ಷ ರೂ.ಗಳ ದೇಣಿಗೆ ಘೋಷಿಸಿದ್ದಾರೆ. ಮಾತ್ರವಲ್ಲ, ಪರಿಸ್ಥಿತಿಯನ್ನು ಅವಲೋಕಿಸಿ ಇನ್ನಷ್ಟು ಸಹಾಯ ಮಾಡುವ ಭರವಸೆಯನ್ನು ಕೂಡ ಸ್ವಾಮೀಜಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಚಾರ್ತುಮಾಸ್ಯದಲ್ಲಿರುವ ಪೇಜಾವರ ಶ್ರೀಗಳು ಪ್ರತಿಕಾ ಪ್ರಕಟಣೆಯಲ್ಲಿ ಪರಿಹಾರ ಕಲ್ಪಿಸುವ ವಿಚಾರ ತಿಳಿಸಿದ್ದಾರೆ. ಮಾತ್ರವಲ್ಲ, ರಾಜ್ಯದ ಅತ್ಯಂತ ರಮಣೀಯ ಸ್ಥಳವಾದ ಕೊಡಗು ಮತ್ತು ಸುಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಜನರು ಅನುಭವಿಸುತ್ತಿರುವ ನೋವು ಅವರ್ಣನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೀರರ ನಾಡು ಕೊಡಗಿನ ಸಂತ್ರಸ್ತರಿಗೆ ನೆರವಿನ ಅವಶ್ಯಕತೆಯಿದೆ. ನಿರಾಶ್ರಿತರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಚಾರ್ತುಮಾಸ್ಯವಾದ್ದರಿಂದ ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಚಾರ್ತುಮಾಸ್ಯ ಮುಗಿದ ಕೂಡಲೇ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ. ನಮ್ಮ ಮಠದ ಟ್ರಸ್ಟ್ ವತಿಯಿಂದ ಸದ್ಯಕ್ಕೆ ಹತ್ತು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದೇನೆ. ಮುಂದೆಯೂ ಕೊಡವರ ನೋವಿನ ಜೊತೆ ಸ್ಪಂದಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.