ಮಂಗಳೂರು, ಆ 24 (SS): ಕೊಡಗು ಮತ್ತು ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಭೀಕರ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ದೊಡ್ಡ ಸವಾಲಾಗಿತ್ತು. ಇದೀಗ ಮಳೆಯ ಭೀಕರತೆ ಸ್ಪಲ್ಪ ತಗ್ಗಿರುವುದರಿಂದ ಪರಿಹಾರ ಕಾರ್ಯಗಳು ಚುರುಕುಗೊಂಡಿವೆ.
ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಗಳಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿರುವ ಬೆನ್ನಲ್ಲಿ, ಮತ್ತೊಂದು ಮಾನವೀಯ ಕಾರ್ಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ವತಿಯಿಂದ ನಡೆಯುತ್ತಿದೆ. ಮಳೆ ಮತ್ತು ನೆರೆಯಿಂದ ನಿರಾಶ್ರಿತರಾಗಿರುವ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ಸಂತ್ರಸ್ತ ಜನರಿಗೆ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ವೈದ್ಯರು, ನರ್ಸ್ಗಳು ಮತ್ತು ಸಹಾಯಕರ ತಂಡವನ್ನು ಕಳುಹಿಸಿಕೊಡಲಾಗಿದೆ.
ಫಾ. ಪೀಟರ್ ಸಲ್ದಾನಾ ಅವರ ಆಶೀರ್ವಾದದೊಂದಿಗೆ ಒಟ್ಟು 35 ಕ್ಕೂ ಮಿಕ್ಕಿ ಸದಸ್ಯರ ತಂಡವನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿದ್ದು, ಕಂಗಾಲಾಗಿರುವ ಜನರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ಉಚಿತವಾಗಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಫಾದರ್ ಮುಲ್ಲರ್ ಹೋಮಿಯೊಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ, ಮುಲ್ಲರ್ ಕೇರ್ ಎಂಬ ಅಭಿಯಾನದಡಿ ನೆರೆಪೀಡಿತ ಪ್ರದೇಶಗಳಿಗೆ ನುರಿತ ವೈದ್ಯಕೀಯ ತಂಡವನ್ನು ಕಳುಹಿಸಿ ಉಚಿತ ಚಿಕಿತ್ಸೆ ನೀಡಿ ಸಂತ್ರಸ್ತರನ್ನು ಸಲಹುತ್ತಿದ್ದಾರೆ.
ಈ ವೇಳೆ ಮಾತನಾಡಿದ ಫಾ. ಪೀಟರ್ ಸಲ್ದಾನಾ, ಕೇರಳ ಮತ್ತು ಕೊಡಗಿನಲ್ಲಿ ನಿರಾಶ್ರಿತರು ಶಿಬಿರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ವೈದ್ಯಕೀಯ ನೆರವನ್ನು ನೀಡುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಮುಂದಾಗಿರುವುದು ಸ್ವಾಗತಾರ್ಹ. ಈ ಹಿಂದೆಯೂ ಫಾದರ್ ಮುಲ್ಲರ್ ಸಂಸ್ಥೆ ಅನೇಕ ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಮುಂದೆಯೂ ಜನರ ಕಷ್ಟಗಳಿಗೆ ಆಸ್ಪತ್ರೆ ಸದಾ ಸ್ಪಂದಿಸುತ್ತದೆ ಎಂದು ತಿಳಿಸಿದ್ದಾರೆ.
ಇದೀಗ ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಯ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.