ಮಂಗಳೂರು, ಮಾ 17 (DaijiworldNews/MS): ನದಿ ನೀರಿನ ಒಳ ಹರಿವಿನ ಲಭ್ಯತೆಯನ್ನು ಆಧರಿಸಿ ಕುಡಿಯುವ ನೀರಿನ ಸರಬರಾಜನ್ನು ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಂಡು ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚನೆ ನೀಡಿದ್ದಾರೆ. ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಕುರಿತ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬೇಸಿಗೆಯಿಂದಾಗಿ ನದಿಯ ನೀರಿನ ಮೂಲಗಳು ಬತ್ತುವುದರೊಂದಿಗೆ ನದಿಯಲ್ಲಿ ನೀರಿನ ಹರಿವು ದಿನೇ ದಿನೇ ಕ್ಷೀಣಿಸುತ್ತಿದ್ದು ಸಾಮಾನ್ಯವಾಗಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ನದಿಯ ನೀರು ಆಧಾರವಾಗಿದ್ದು ಮುಂದಿನ ಮಾನ್ಸೂನ್ ಮಳೆ ಪ್ರಾರಂಭದ ವರೆಗೆ ಲಭ್ಯತೆಯನ್ನು ಆಧರಿಸಿ ಕುಡಿಯುವ ನೀರಿನ ಸರಬರಾಜನ್ನು ಮಾಡಬೇಕೆಂದು ಸೂಚನೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.ಸಾರ್ವಜನಿಕರು ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಲು ಅರಿವು ಮೂಡಿಸುವುದರೊಂದಿಗೆ ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಮನವರಿಕೆ ಮಾಡಿಕೊಡಬೇಕು ಎಂದ ಅವರು ವಾಣಿಜ್ಯ ಬಳಕೆಗೆ ಸಂಪರ್ಕ ನೀಡಿರುವ ನಲ್ಲಿ ನೀರಿನ ಸೌಲಭ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದರು.
ಕುಡಿಯುವ ನೀರು ಸರಬರಾಜು ಕೊಳವೆಗಳಲ್ಲಿ ಆಗುತ್ತಿರುವ ಸೋರಿಕೆಯ ದುರಸ್ಥಿ ಕಾರ್ಯಗಳನ್ನು ತಕ್ಷಣದಲ್ಲಿಯೇ ಕೈಗೊಳ್ಳಬೇಕು, ನಲ್ಲಿ ನೀರಿನ ಪೈಪ್ಗಳಿಗೆ ನೇರವಾಗಿ ಕೆಲವರು ಪಂಪ್ಗಳನ್ನು ಅಳವಡಿಸಿ ನೀರನ್ನು ಸೆಳೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆಯೂ ಸಹ ಎಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳಬೇಕು ಎಂದರು.
ನದಿಯ ನೀರಿನ ಲಭ್ಯತೆ ಅಲ್ಲದೆ ಇತರೆ ನೀರಿನ ಮೂಲಗಳನ್ನು ಗುರುತಿಸಿ ಅವುಗಳ ಬಳಕೆಗೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದ ಅವರು ನೀರಿನ ಲಭ್ಯತೆಯ ಪ್ರಮಾಣ ಅವುಗಳ ಸರಬರಾಜಿನ ಮೇಲ್ವಿಚಾರಣೆ ನಡೆಸಲು ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು.ನದಿ ಪಾತ್ರದ ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ನೀರು ಹಾಯಿಸಲು ಅನಧಿಕೃತ ಪಂಪು ಸೆಟ್ಗಳನ್ನು ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್, ಪ್ರೊಬೇಶನರಿ ಐ.ಎ.ಎಸ್. ಮೋನಾ ರೋತ್ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.