ಮಡಿಕೇರಿ, ಆ 24(SS): ಭೀಕರ ಜಲ ಪ್ರವಾಹದಿಂದ ತತ್ತರಿಸಿಹೋಗಿದ್ದ ಕೊಡಗು ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದು, ಸಾಕು ಪ್ರಾಣಿಗಳ ರಕ್ಷಣಾ ಕಾರ್ಯ ನಡೆಯುತ್ತಿದೆ. ಪ್ರಾಣಿ ದಯಾ ಸಂಘಟನೆಗಳು, ಪ್ರಾಣಿ ಕಲ್ಯಾಣ ಸಂಸ್ಥೆಗಳ ಕಾರ್ಯಕರ್ತರು ಸಾಕು ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಮಡಿಕೇರಿ ತಾಲೂಕಿನಲ್ಲಿ ಪವಾಡ ಸದೃಶ ಘಟನೆಯೊಂದು ನಡೆದಿದೆ.
ಸಾಂದರ್ಭಿಕ ಚಿತ್ರ
ಮಡಿಕೇರಿ ತಾಲೂಕಿನ ಕಾಲೂರು ಎಂಬ ಪುಟ್ಟ ಗ್ರಾಮದಲ್ಲಿ ಬೆಟ್ಟ ಕುಸಿದು ಗೋಮಾತೆಯೊಂದು ಕಳೆದ 7 ದಿನಗಳಿಂದ ಮಣ್ಣಿನಡಿ ಸಿಲುಕಿತ್ತು. ಮಾತ್ರವಲ್ಲ, ಗೋವು ಕೆಸರಿನಲ್ಲಿ ಹೂತು ಹೋಗಿತ್ತು. ಆದರೆ ಇದೀಗ ಮಣ್ಣಿನಲ್ಲಿ 7 ದಿನಗಳಿಂದ ಹೂತು ಹೋಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮಾತೆ ಗೋವಿನ ರಕ್ಷಣೆಯನ್ನು ಮಾಡಿ ಮರುಜೀವ ನೀಡಲಾಗಿದೆ.
ಬೆಟ್ಟ ಕುಸಿದು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿತ್ತು. ಮಣ್ಣಿನ ರಾಶಿಯಲ್ಲಿ ಹಸುವಿನ ತಲೆ ಮಾತ್ರ ಕಾಣಿಸುತ್ತಿತ್ತು. ಹುಲ್ಲು, ನೀರು, ಆಹಾರ ಯಾವುದು ಇಲ್ಲದೇ ಕೇವಲ ಕಣ್ಣು ಮಾತ್ರ ಮಿಟುಕಿಸುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಾತೆ ಗೋವನ್ನು ರಕ್ಷಿಸಿದ್ದಾರೆ. ಗಾಯಗೊಂಡಿರುವ ಹಸುವಿಗೆ ಚಿಕಿತ್ಸೆ ನೀಡಿ, ನೋಡಿಕೊಳ್ಳುತ್ತಿದ್ದಾರೆ.
ನಡುಗಡ್ಡೆಯಂತಾಗಿರುವ ಕೊಡಗಿನಲ್ಲಿ ಗುಡ್ಡಗಳು, ಮುರಿದು ಬಿದ್ದಿರುವ ಮನೆಗಳು, ಕೆಸರಿನಲ್ಲಿ ಸಿಲುಕಿದ್ದ ಪ್ರಾಣಿಗಳ ರಕ್ಷಣೆಯ ಕಾರ್ಯ ಭರದಿಂದ ನಡೆಯುತ್ತಿದೆ.