ಉಡುಪಿ, ಮಾ 17 (DaijiworldNews/MS): ಜಿಲ್ಲೆಯ ಕೋಟೇಶ್ವರದಲ್ಲಿ ಅಯೋಧ್ಯೆಯ ಶ್ರೀರಾಮನಿಗೆ ಭವ್ಯವೂ, ದಿವ್ಯವೂ ಆದ ರಥ ನಿರ್ಮಾಣಗೊಳ್ಳಲಿದೆ. ಜಗತ್ತಿನಲ್ಲೇ ಅತಿ ಎತ್ತರದ ಬ್ರಹ್ಮರಥವೂ ಸಿದ್ಧಗೊಳ್ಳಲಿದ್ದು, ಮೇ ತಿಂಗಳಲ್ಲಿ ಬೃಹತ್ ರಥ ನಿರ್ಮಾಣಕ್ಕೆ ಚಾಲನೆ ಸಿಗುವ ಸಾಧ್ಯತೆಗಳಿವೆ. ಅದಕ್ಕಾಗಿ ಈಗಾಗಲೇ ತಯಾರಿಗಳು ನಡೆಯುತ್ತಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ, ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯ ಇದರ ನೇತೃತ್ವದಲ್ಲಿ ಈ ರಥ ನಿರ್ಮಾಣವಾಗಲಿದೆ. ರಥ ನಿರ್ಮಾಣ ಪೂರ್ವಭಾವಿಯಾಗಿ ಈಗಾಗಲೇ ಕುಂಭಾಶಿಯಲ್ಲಿ ಸುರಕ್ಷಿತವಾದ ಮಾಡು ನಿರ್ಮಾಣ ಮಾಡಲಾಗುತ್ತಿದೆ.
10 ಅಡಿಗಳ ಚಕ್ರ, 20 ಅಡಿ ಜಿಡ್ಡೆ, ಪೀಠ 8 ಅಡಿ, ಪತಾಕೆ ಭಾಗ 36 ಅಡಿ, ಮಂಟಪ ಭಾಗ 5 ಅಡಿ, ಕಲಶ ಭಾಗ 5 ಅಡಿ ಸಹಿತ ರಥದ ಒಟ್ಟು ಎತ್ತರ 84 ಅಡಿ ಹಾಗೂ ಅಗಲ 26 ಅಡಿ. ರಥಕ್ಕೆ ಉತ್ತರಾಖಂಡದ ಸಾಗುವಾನಿ, ಚಕ್ರಕ್ಕೆ ಬೋಗಿ ಮರ ಬಳಸಲಾಗುತ್ತದೆ ಎನ್ನಲಾಗಿದೆ.
ರಥದ ಸುತ್ತ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಅಪೂರ್ವ ಕೆತ್ತನೆಗಳಿರುತ್ತದೆ. ಇಡೀ ರಾಮಾಯಣವನ್ನು ಈ ರಥದ ಮೂಲಕವೇ ನೋಡಬಹುದಾದ ಯೋಚನೆಯಲ್ಲಿ ರಥ ನಿರ್ಮಾಣವಾಗಲಿದೆ. ಎರಡುವರೆ ವರ್ಷದ ಅವಧಿಯಲ್ಲಿ ರಥದ ನಿರ್ಮಾಣವಾಗಲಿದೆ. ರಥ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯ ಶೀಘ್ರ ನಡೆಯಲಿದ್ದು ಅಯೋಧ್ಯೆಯಿಂದಲೇ ಸ್ವಾಮೀಜಿಗಳು ಆಗಮಿಸಲಿದ್ದು ಕೋಟೇಶ್ವರಕ್ಕೆ ಭೇಟಿ ನೀಡಿ ರಥ ನಿರ್ಮಾಣಕ್ಕೆ ವೀಳ್ಯ ನೀಡಲಿದ್ದಾರೆ. ಆ ನಂತರ ರಥ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಅಯೋಧ್ಯೆಯ ಶ್ರೀರಾಮನಿಗೆ ಉಡುಪಿ ಜಿಲ್ಲೆಯ ಕೋಟೇಶ್ವರದಿಂದ ರಥ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ, ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯ ಅವರು ಕರ್ನಾಟಕದ ಹಲವಾರು ದೇವಸ್ಥಾನಗಳಿಗೆ ಬ್ರಹ್ಮರಥ, ಪುಷ್ಪರಥ ಸೇರಿದಂತೆ ವಿವಿಧ ಮಾದರಿಯ ರಥಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದೀಗ ಜಗತ್ತಿನಲ್ಲೇ ಎತ್ತರದ ರಥ ಅಯೋಧ್ಯೆಗೆ ನಿರ್ಮಾಣವಾಗುತ್ತಿದೆ.