ಕಡಬ, ಮಾ. 16 (DaijiworldNews/SM): ತಡರಾತ್ರಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನಲಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಬುಧವಾರ ಸಂಜೆ ವೇಳೆಗೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಗುರುವಾರ ಕಡಬ ಠಾಣೆಯ ಎದುರು ಧರಣಿ ನಡೆಸುವುದಾಗಿ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿದ್ದು, ಇಲ್ಲಿಯ ತನಕ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗುರುವಾರದಂದು ಕಡಬ ಠಾಣೆಗೆ ಸಂಘಟನೆಗಳು ಮುತ್ತಿಗೆ ಹಾಕಲು ಮುಂದಾಗಿವೆ.

ಸುಬ್ರಹ್ಮಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಿಂದ ಬೆಳೆ ಬಾಳುವ ಮರಗಳು ಲೂಟಿಯಾಗುತ್ತಿದೆ ಎಂದು ದೂರು ನೀಡಿದ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ನಡುರಾತ್ರಿ ದಾಳಿ ನಡೆಸಿ ದಾಂಧಲೆ ನಡೆಸಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅರಣ್ಯಾಧಿಕಾರಿಗಳ ವರ್ತನೆಯ ವಿರುದ್ಧ ತೀವ್ರ ಆಕ್ರೋಶಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದೂರುದಾರ ಮನೆಯವರು ಹಾಗೂ ನೀತಿ ತಂಡದವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಸತ್ಯಾಗ್ರಹಕ್ಕೆ ಬೆಂಬಲ ನೀಡಿರುವ ದಲಿತ ಸಂಘಟನೆಗಳು ಪ್ರಕರಣ ದಾಖಲಿಸದಿದ್ದರೆ ಕಡಬ ಠಾಣೆಯ ಎದುರೇ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಇಂದು ಉಪವಾಸ ನಿರತರು ಹಲವಾರು ಅಸೌಖ್ಯದಿಂದಾಗಿ ಆಸ್ಪತ್ರೆಗೆ ಸೇರಿದ್ದಾರೆ.
ಸುಬ್ರಹಣ್ಯ ವಲಯ ರಕ್ಷಿತಾರಣ್ಯದ ಐತ್ತೂರು ಭಾಗದ ಅರಣ್ಯದಲ್ಲಿ ಕೋಟ್ಯಾಂತರ ಪ್ರಮಾಣದ ಬೆಳೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡಲಾಗಿದೆ, ಇದರಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಇದರ ವಿರುದ್ಧ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎನ್ನುವವರು ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆ ದೂರು ನೀಡಿದ್ದರು.
ಆದರೆ ಇದಕ್ಕೆ ಯಾವುದೇ ಸ್ಪಂದನ ದೊರೆಯದಿದ್ದಾಗ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿತ್ತು. ಇದರ ಪರಿಣಾಮವಾಗಿ ತನಿಖಾ ಆದೇಶ ಹೊರ ಬಿದ್ದಿತ್ತು. ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ನೇತೃತ್ವದ ತಂಡ ತನಿಖೆಯ ಕಾರ್ಯಚರಣೆಗೆ ಇಳಿದಿತ್ತು. ಈ ಸಂದರ್ಭ ದೂರುದಾರನ ಮೇಲೆ ಹಗೆ ಸಾಧನೆ ಮಾಡಲಾಗಿದೆ ಎನ್ನುವುದು ಪ್ರಸಾದ್ ಅವರ ಆರೋಪ.