ಮಡಿಕೇರಿ, ಆ 24(SS): ರಣ ಮಳೆ ಮತ್ತು ಭೀಕರ ಪ್ರವಾಹಕ್ಕೆ ತತ್ತರಿಸಿರುವ ಕೊಡಗು ಜಿಲ್ಲೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇಅಲ್ಲಿನನೆರೆಸಂತ್ರಸ್ತರೊಂದಿಗೆಮಾತಕತೆನಡೆಸಿಮಾಹಿತಿಪಡೆಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಿಮ್ಮ ಜೊತೆ ನಾವಿದ್ದೇವೆ. ಬದುಕು ಕಟ್ಟಿಕೊಡಲು ನಾವು ಬದ್ಧ. ಕೊಡಗಿನ ರಸ್ತೆಗಳು, ಮನೆಗಳು, ಕಟ್ಟಡಗಳು, ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಪುನಃಸ್ಥಾಪಿಸುವ ಸಲುವಾಗಿ ನಾನು ಇಲ್ಲಿಗೆ ಬಂದಿರುವುದು. ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ಭಾರತೀಯ ಸೇನೆ ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ಹೇಳಿದ್ದಾರೆ.
ನರಸಿಂಹ ಕಲ್ಯಾಣ ಮಂಟಪದಲ್ಲಿರುವ ನಿರಾಶ್ರಿತರ ವಿಚಾರವಾಗಿ ಮಾತನಾಡಿದ ಸಚಿವರು, ಈ ಸ್ಥಿತಿಯಲ್ಲಿ ನಿಮ್ಮನ್ನು ನೋಡುವುದಕ್ಕೆ ನನಗೆ ಬೇಸರವಾಗುತ್ತದೆ. ಅನೇಕ ಮಂದಿ ಆಸ್ತಪಾಸ್ತಿ ಹಾನಿಗೊಳಗಾಗಿ ನಿರಾಶ್ರಿತರಾಗಿದ್ದೀರಿ. ಕೊಡಗನ್ನು ಪುನರ್ ಸ್ಥಾಪಿಸಲು ಸೇನೆ ಎಲ್ಲಾ ರೀತಿಯ ನೆರವು ನೀಡಲಿದೆ. ಜೊತೆಗೆ ಏರ್ ಫೋರ್ಸ್ ಕೂಡ ತನ್ನ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಮಳೆಯ ಹಾನಿಯ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಸರಕಾರ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಆದಷ್ಟು ಬೇಗ ವಸತಿ ಕಲ್ಪಿಸುವ ಕಾರ್ಯಕ್ಕೆ ಸರ್ಕಾರಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಭರವಸೆ ನೀಡಿದ್ದಾರೆ.