ಮಂಗಳೂರು, ಆ 24(SS): ಈಗಾಗಲೇ ಇಬ್ಬರು ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಕಿಲಾಡಿಯೊಬ್ಬ, ಮತ್ತೊಂದು ಯುವತಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಆರೋಪಿಯನ್ನು ಜಪ್ಪಿನಮೊಗರು ನಿವಾಸಿ ಅಶೋಕ್ ಎಂದು ಗುರುತಿಸಲಾಗಿದೆ.
ಈಗಾಗಲೇ ಈ ವಂಚಕ ಅಶೋಕನಿಗೆ 2 ಮದುವೆಯಾಗಿದೆ. ಈ ಹಿಂದೆ ಶ್ರೀಲಂಕಾದಲ್ಲಿ ಉದ್ಯೋಗದಲ್ಲಿದ್ದಾಗ ಅಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಬಳಿಕ ಆಕೆಗೆ ವಂಚಿಸಿ ಶಾರ್ಜಾದಲ್ಲಿ ಇನ್ನೊಂದು ಮದುವೆಯಾಗಿದ್ದನು. ಈ ನಡುವೆ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ವಂಚಕ ಅಶೋಕ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಶಾರ್ಜಾದ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ ಅಶೋಕ ಪಡುಬಿದ್ರಿಯಲ್ಲಿರುವ ಹುಡುಗಿಯನ್ನು ಮದುವೆಯಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಮದುವೆಗೋಸ್ಕರ ಊರಿಗೆ ಬಂದಿದ್ದನು. ಆದರೆ ಈತನ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿದೆ. ಈ ವೇಳೆ ಯುವತಿ ಮನೆಯವರು ಎಚ್ಚೆತ್ತುಕೊಂಡು ತಕ್ಷಣ ಈತನ ವಿರುದ್ಧ ದೂರು ನೀಡಿದ್ದಾರೆ.
ಇದೀಗ ಪೊಲೀಸರು ಈತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.