ಉಡುಪಿ, ಮಾ18 (DaijiworldNews/MS): ಎಮ್ ಐಟಿಕೆ ಕ್ಯಾಂಪಸ್ ಮಣಿಪಾಲದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್ ನ ಒಳಗಡೆ ಇರುವಂತಹ 5000 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ಕೊವೀಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಮ್ಮ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣ ಧೀಡೀರ್ ಏರಿಕೆಯಾಗಿದ್ದು, ಈ ಪೈಕಿ ಎಂಐಟಿಕೆ ಮಣಿಪಾಲ ಕ್ಯಾಂಪಸ್ ಒಂದರಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದಕ್ಕಾಗಿ ಈಗಾಗಲೇ ಎಂಐಟಿಕೆ ಮಣಿಪಾಲದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಭೆ ಸೇರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ .ಮಣಿಪಾಲ ಕ್ಯಾಂಪಸ್ ನಲ್ಲಿ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈಗಾಗಲೇ ಇವರಿಗೆ ಕ್ಯಾಂಪಸ್ ಬಿಟ್ಟು ಹೊರಬರದಂತೆ ಸೂಚಿಸಲಾಗಿದ್ದು ಆ ಪ್ರದೇಶವನ್ನು ಸೀಲ್ ಡೌನ್ ಮಾಡಿ , ಕಾಂಟೋನ್ಮೇಟ್ ಝೋನ್ ಎಂದು ಘೋಷಿಸಲಾಗಿದೆ. ನೇರ ತರಗತಿ , ಹಾಗೂ ಪರೀಕ್ಷೆಗಳು ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಆನ್ ಲೈನ್ ಕ್ಲಾಸ್ ಮುಂದುವರಿಸುವಂತೆ ಸೂಚಿಸಲಾಗಿದೆ.
ಈ ಕ್ಯಾಂಪಸ್ ಗೆ ಸೋಂಕು ತಗುಲಿದರೆ ಮುಂದೆ ವೇಗವಾಗಿ ಹರಡುವ ಸಾಧ್ಯತೆ ಇದೆ. ನಿನ್ನೆ ಏಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ವಿದ್ಯಾರ್ಥಿಗಳು ಮಣಿಪಾಲ ಸುತ್ತಮುತ್ತ ಓಡಾಡಿರುವುದರಿಂದ , ಮಣಿಪಾಲದ ಜನತೆ ಹಾಗೂ ಸುತ್ತಮುತ್ತದ ಅಂಗಡಿ ವ್ಯಾಪಾರಸ್ಥರು ಕೊವೀಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.