ಮಂಗಳೂರು, ಮಾ.18 (DaijiworldNews/MB) : ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಗುರುವಾರ ಹಿರಿಯ ಹಾಗೂ 45 ಮೇಲ್ಪಟ್ಟ ಅನಾರೋಗ್ಯ ಪೀಡಿತ ಪತ್ರಕರ್ತರಿಗೆ ಪ್ರಥಮ ಸುತ್ತಿನ ಲಸಿಕೆಗೆ ಚಾಲನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ತಾವು ಎರಡನೇ ಸುತ್ತಿನ ಕೊರೊನಾ ಲಸಿಕೆಯನ್ನು ತೆಗೆದುಕೊಂಡರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಸಭೆ, ಸಮಾರಂಭಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ'' ಎಂದು ತಿಳಿಸಿದರು.













''ಕೊರೊನಾ ಸೋಂಕು ಅಧಿಕವಾಗುತ್ತಿದೆ. ಈ ಕಾರಣದಿಂದಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಹೊಸ ಮಾರ್ಗಸೂಚಿ ಹೊರಡಿಸಲಾಗುವುದು'' ಎಂದು ಹೇಳಿದರು.
''ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನರು ಭಯಭೀತರಾಗಬಾರದು. ಆದರೆ ಎಲ್ಲಾ ರೀತಿಯ ನಿಯಂತ್ರಣ ಕ್ರಮ, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಬಿಪಿ ಅಥವಾ ಸಕ್ಕರೆ ಕಾಯಿಲೆ ಇರುವ 45 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ. ಯಾವುದೇ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಈಗ 48 ಗಂಟೆಗಳ ಒಳಗೆ ವರದಿಯನ್ನು ಪಡೆಯಬಹುದಾಗಿದೆ'' ಎಂದು ಹೇಳಿದರು.
''ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವ ಜನರ ಮೇಲೆ ಕಣ್ಣಿಡಲು ನಾವು ಬಿಬಿಎಂಪಿ ಮಾರ್ಷಲ್ಗಳಂತೆಯೇ 20-30 ಹೋಂ ಗಾರ್ಡ್ಗಳನ್ನು ನಿಯೋಜಿಸುತ್ತೇವೆ. ಅವರನ್ನು ಸಾರ್ವಜನಿಕ ಸ್ಥಳಗಳು, ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ನಿಯೋಜಿಸಲಾಗುವುದು. ಈ ಸಭೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಮಾರ್ಗಸೂಚಿ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಗೃಹರಕ್ಷಕರಿಗೆ ಅವಕಾಶ ನೀಡಲಾಗುತ್ತದೆ. ಅವರು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಾರೆ. ಹೆಚ್ಚಿನ ಜನ ಸಂಖ್ಯೆಯಿರುವ ಪಾಲಿಕೆಯ ಮಿತಿಯ ಪ್ರದೇಶದಲ್ಲಿ ಅವರು ಹೆಚ್ಚಾಗಿ ಇರುತ್ತಾರೆ ಎಂದು ತಿಳಿಸಿದರು.
''ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತೇವೆ. ದಿನಕ್ಕೆ 70 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡುವ ಹಲವಾರು ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯೂ ಕೂಡಾ ಒಂದಾಗಿದೆ. ನಮಗೆ ಹೆಚ್ಚಿನ ಜಾಗೃತಿ ಬೇಕು'' ಎಂದರು.
''ದೇವಾಲಯದ ಸಿಬ್ಬಂದಿಗಳು ಸಹ ದುರ್ಬಲ ವಿಭಾಗದಿಂದ ಬಂದಿರುವ ಕಾರಣ ನಾವು ಅವರಿಗೂ ಲಸಿಕೆ ಹಾಕುತ್ತೇವೆ'' ಎಂದು ಹೇಳಿದ ಜಿಲ್ಲಾಧಿಕಾರಿ, ''ನಮ್ಮಲ್ಲಿ ಎ, ಬಿ ಮತ್ತು ಸಿ ವಿಭಾಗಗಳ 500 ಕ್ಕೂ ಹೆಚ್ಚು ದೇವಾಲಯಗಳಿವೆ. 1000 ಕ್ಕೂ ಹೆಚ್ಚು ದೇವಾಲಯದ ಸಿಬ್ಬಂದಿಗಳು ಕೊರೊನಾ ಲಸಿಕೆ ಪಡೆಯಬಹುದು. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಕೆಎಸ್ಆರ್ಟಿಸಿ ಬಸ್ಗಳಿಂದ ಜನರನ್ನು ಲಸಿಕೆ ಪಡೆಯಲು ಕರೆತರುವ ವ್ಯವಸ್ಥೆ ಮಾಡುತ್ತೇವೆ, ಏಕೆಂದರೆ ಕೆಲವು ದೂರದ ಸ್ಥಳಗಳಿಂದ ಜನರಿಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಅವರಿಗೆ ಲಸಿಕೆಯ ಅಗತ್ಯವಿರುತ್ತದೆ'' ಎಂದು ವಿವರಿಸಿದರು.
''ನಾವು 100 ಕಾಲೇಜುಗಳಿಗೆ ಒಂದು ಸುತ್ತಿನ ಪರೀಕ್ಷೆಯನ್ನು ನಡೆಸಿದ್ದೇವೆ, ಅದರಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದೆ. ಇದರಲ್ಲಿ ಕೆಲವು ಮಾತ್ರ ರೋಗ ಲಕ್ಷಣ ಹೊಂದಿರುವವರಾಗಿದ್ದಾರೆ'' ಎಂದು ಡಾ ಕೆ ವಿ ರಾಜೇಂದ್ರ ಹೇಳಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯಾರಿ ಮಾತನಾಡಿ, ''ಇಂದು 69 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಡಿಸೆಂಬರ್ನಿಂದ ಮಾರ್ಚ್ 14 ರವರೆಗೆ ಜಿಲ್ಲೆಯಲ್ಲಿ 8347 ಕೇರಳ ಮೂಲದ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು ಈ ಪೈಕಿ 425 ಮಂದಿಗೆ ಪಾಸಿಟಿವ್ ಆಗಿದೆ. 201609 ಹಿರಿಯ ನಾಗರಿಕರಿಗೆ ಕೊರೊನಾ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಈವರೆಗೆ 19,050 ಮಂದಿ ಲಸಿಕೆ ಪಡೆದಿದ್ದಾರೆ'' ಎಂದು ತಿಳಿಸಿದರು.