ಅಸ್ಸಾಂ, ಆ 24 (MSP) : ನಿಮ್ಮಲ್ಲಿರುವ ದೈಹಿಕ ಸಮಸ್ಯೆ, ಮಾನಸಿಕ ಸಮಸ್ಯೆ , ಆರ್ಥಿಕ ಸಂಕಷ್ಟಗಳಿಗೆ ನಾನು ಕೊಡುವ ಚುಂಬನದಿಂದ ಪರಿಹಾರ ಸಿಗುತ್ತೆ ಎಂದು ತನ್ನ ಬಳಿ ಬರುವ ಭಕ್ತರನ್ನು ನಂಬಿಸಿ ಆಲಂಗಿಸಿ, ಚುಂಬಿಸುತ್ತಿದ್ದ 'ಕಿಸ್ಸಿಂಗ್ ಬಾಬಾ' ಎಂದೇ ತನ್ನ ಅನುಯಾಯಿಗಳಲ್ಲಿ ಕುಖ್ಯಾತನಾಗಿದ್ದ ಸ್ವಘೋಷಿತ ದೇವಮಾನವ ರಾಮ್ ಪ್ರಕಾಶ್ ಚೌಹಾಣ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ತನ್ನ ಚುಂಬನದಲ್ಲಿ ಅತೀಂದ್ರಿಯ ಶಕ್ತಿ ಇದೆ. ಇದು ಯಾವುದೇ ಖಾಯಿಲೆಯನ್ನು ನಿವಾರಿಸಬಲ್ಲದು ಎಂದು ನಂಬಿಸಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ . ಕಿಸ್ಸಿಂಗ್ ಬಾಬಾ ಎಂದೇ ಫೇಮಸ್ಸ್ ಆಗಿರುವ ಈ ನಕಲಿ ಬಾಬಾನ ಬಳಿ ಆನಾರೋಗ್ಯ ಪೀಡಿತ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಮುಗ್ದ ಜನರು ಪರಿಹಾರಕ್ಕಾಗಿ ಬರುತ್ತಿದ್ದರು. ಆಗ ಈ ಬಾಬಾ ಅವರನ್ನು ಆಲಂಗಿಸಿ, ಚುಂಬಿಸುತ್ತಿದ್ದ. ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳನ್ನೆಲ್ಲಾ ನಾನು ಪರಿಹರಿಸುತ್ತೇನೆ ಎಂದು ಸುಳ್ಳು ಬೇರೆ ಹೇಳ್ತಾ ಇದ್ದ. ಈ 'ಮುತ್ತುಗಳ ರಾಜ', ನಕಲಿ ಬಾಬಾ ಚೌಹಾಣ್ ಭೋರಾಲ್ತುಪ್ ಗ್ರಾಮದಲ್ಲಿ ಬೀಡುಬಿಟ್ಟಿದ್ದಾನೆ ಎಂಬ ಮಾಹಿತಿಯನ್ನು ಪಡೆದ ಪೊಲೀಸರು ಆತನನ್ನು ಆಗಸ್ಟ್ 22ರಂದು ಬಂಧಿಸಿದ್ದಾರೆ.
ಈ ಕಿಸ್ಸಿಂಗ್ ರಾಜ ಸ್ಥಳೀಯವಾಗಿ ತನ್ನ ನಕಲಿ ಪವಾಡಗಳಿಂದ ಜನಪ್ರೀಯನಾಗಿದ್ದು ಈತನ ಮಂದಿರಕ್ಕೆ ಮಹಿಳೆಯರೇ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು ಎನ್ನುವುದು ವಿಪರ್ಯಾಸ ಸಂಗತಿ. ಸುಮಾರು ಮೂರು ತಿಂಗಳಿಂದ ಆತ ತನ್ನಲ್ಲಿ ಅತೀಂದ್ರಿಯ ಶಕ್ತಿಗಳಿವೆ ಎಂದು ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಕಿಸ್ಸಿಂಗ್ ಸ್ವಾಮಿಯ ಜತೆಗೆ ಆತನ ತಾಯಿಯನ್ನು ಕೂಡ ಪ್ರಶ್ನಿಸುವುದಕ್ಕಾಗಿ ,ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.