ಪುತ್ತೂರು, ಆ 24(SS): ವೀರರ ನಾಡು ಕೊಡಗು ಭೀಕರ ಪ್ರವಾಹದಿಂದ ಕಂಗೆಟ್ಟಿದ್ದು, ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಮಹಾಮಳೆಯಿಂದ ಕೊಡಗು ಜಿಲ್ಲೆ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರು ವಿವೇಕಾನಂದ ವಿದ್ಯಾ ಸಂಸ್ಥೆ ಸಂತ್ರಸ್ತರಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.
ಪ್ರವಾಹ ಪೀಡಿತ ಜಿಲ್ಲೆಯ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಪುತ್ತೂರು ವಿವೇಕಾನಂದ ವಿದ್ಯಾ ಸಂಸ್ಥೆ ಕೊಡಗು ಸಂತ್ರಸ್ತರಿಗೆ ಆರ್ಥಿಕ ಸಹಾಯ, ದೈನಂದಿನ ಆಹಾರ ಪೂರೈಕೆ ಮಾಡುವ ಮಾದರಿ ಕೆಲಸಕ್ಕೆ ಮುಂದಾಗಿದೆ.
ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಕೊಡವರ ಮಕ್ಕಳಿಗೆ ಪುತ್ತೂರು ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಮುಂದಿನ ಒಂದು ವರ್ಷ ಉಚಿತ ವಸತಿ ಮತ್ತು ಶಿಕ್ಷಣ ನೀಡಲು ಸಂಸ್ಥೆ ತೀರ್ಮಾನ ನಿರ್ಧಾರ ಮಾಡಿದ್ದು, ಈ ಮೂಲಕ ಕೊಡವರಿಗೆ ನೆರವಾಗಲು ತೀರ್ಮಾನ ಮಾಡಿದೆ.
ಮಾತ್ರವಲ್ಲ, ಪದವಿಯ ದ್ವಿತೀಯ ವರ್ಷದಲ್ಲಿದ್ದರೂ ತಮ್ಮ ವಿದ್ಯಾ ಸಂಸ್ಥೆಗೆ ಸಂತ್ರಸ್ತ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಳು ಸಂಸ್ಥೆ ಹೆಜ್ಜೆ ಇಟ್ಟಿದೆ. ವಿವೇಕಾನಂದ ವಿದ್ಯಾ ಸಂಸ್ಥೆ ನಾಡಿನಲ್ಲಿಯೇ ಉತ್ತಮ ಹೆಸರು ಪಡೆದು ಗುಣಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದೆ. ಪಾಠದ ಜೊತೆಗೆ ಸಾಮಾಜಿಕ ಜಾಗೃತಿ, ಕ್ರೀಡೆ ಮತ್ತು ಇತರೆ ಕ್ಷೇತ್ರಗಳ ಬಗ್ಗೆಯೂ ಮಾಹಿತಿಗಳನ್ನು ನೀಡುತ್ತಿದೆ.
ಇದೀಗ ಪುತ್ತೂರು ವಿವೇಕಾನಂದ ವಿದ್ಯಾ ಸಂಸ್ಥೆ ಸಂತ್ರಸ್ತರಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದು, ಈ ಮಾದರಿ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.