ಕಡಬ, ಮಾ. 18 (DaijiworldNews/SM): ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ ಎಂಬ ಆರೋಪದಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಕಡಬ ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನವೂ ನಡೆದಿದೆ. ಆದರೆ, ನ್ಯಾಯ ಸಿಗುವುದು ಮಾತ್ರ ದೂರದ ಮಾತು ಎನ್ನಲಾಗಿದೆ.

ಮಾ.೨ ರಂದು ಮಧ್ಯರಾತ್ರಿ ವೇಳೆಯಲ್ಲಿ ಪ್ರಸಾದ್ ಎಂಬವರ ಮನೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಲ್ಲದೆ, ಈ ಸಂಬಂಧ ಅರಣ್ಯಾಧಿಕಾರಿಗಳು ನಡೆದುಕೊಂಡಿದ್ದ ರೀತಿ ವೀಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ವಹಿಸಬೇಕೆಂದು ಸತ್ಯಾಗ್ರಹ ನಿರತರು ಆಗ್ರಹಿಸಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ನೀತಿ ತಂಡವು ಭಾಗವಹಿಸಿದೆ.
ಕಂದಮ್ಮ, ವಯೋವೃದ್ಧರಿದ್ದರೂ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ!
ಇನ್ನು ಸತ್ಯಾಗ್ರಹದಲ್ಲಿ ಪುಟ್ಟ ಮಗು ಸೇರಿದಂತೆ ವಯೋವೃದ್ಧರೂ ನಾಲ್ಕು ದಿನಗಳಿಂದ ಭಾಗವಹಿಸಿದ್ದಾರೆ. ಸತತ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನದೆಸುತ್ತಿರುವುದರಿಂದ ಸತ್ಯಾಗ್ರಹ ನಿರತ ಕೆಲವರ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈವರೆಗೆ ಯಾವುದೇ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ ಎಂಬ ಆರೋಪವನ್ನು ಸತ್ಯಾಗ್ರಹ ನಿರತರು ಮಾಡುತ್ತಿದ್ದಾರೆ.
ಬಡವರಿಗೆ ನ್ಯಾಯ ಎಲ್ಲಿದೆ?
ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ನಡುವೆ ಸತ್ಯಾಗ್ರಹದಲ್ಲಿ ಭಾಗಿಯಾದವರ ಆರೋಗ್ಯದಲ್ಲೂ ಏರುಪೇರಾಗಿದೆ. ಕಂದಮ್ಮ ಸೇರಿದಂತೆ ಹಿರಿಯ ಜೀವಗಳೂ ಕೂಡ ಸತ್ಯಾಗ್ರಹದಲ್ಲಿ ಭಾಗವಹಿಸಿವೆ. ಇಷ್ಟೆಲ್ಲ ಇದ್ರೂ ಕೂಡ ಉನ್ನತ ಮಟ್ಟದ ಅಧಿಕಾರಿಗಳು ಸತ್ಯಾಗ್ರಹ ನಿರತ ಪ್ರದೇಶವನ್ನು ಸುಳಿದೂ ನೋಡಿಲ್ಲ. ಅಲ್ಲದೆ, ಕಡಬ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿರುವುದರಿಂದ ಬಡವರಿಗೆ ನ್ಯಾಯ ಇಲ್ಲವೇ ಎನ್ನುವ ಪ್ರಶ್ನೆಯನ್ನು ಸತ್ಯಾಗ್ರಹ ನಿರತರು ಮಾಡುತ್ತಿದ್ದಾರೆ.