ಬಂಟ್ವಾಳ, ಆ 24(SM): ಲಿಖಿತ ಕೋರಿಕೆಯಂತೆ ಚಾಲಕನೋರ್ವರ ವರ್ಗಾವಣೆಗೆ ಆದೇಶ ನೀಡಿದ್ದರೂ ಅದನ್ನು ರದ್ದುಪಡಿಸಿ ಅವಮಾನಿಸಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅವರ ಕಚೇರಿಯಲ್ಲಿ ಶುಕ್ರವಾರ ಸಂಜೆ ಧರಣಿ ನಡೆಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅವರ ವಾಹನ ಚಾಲಕ ಫ್ರಾನ್ಸಿಸ್ ಎಂಬವರು ಜುಲೈ 31ರಂದು ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಮಂಗಳೂರು ತಾಲೂಕು ಪಂಚಾಯತ್ನ ವಾಹನ ಚಾಲಕರಾಗಿದ್ದ ಮೂಲತಃ ಬಂಟ್ವಾಳದವರಾಗಿರುವ ಅಶೋಕ್ ಕುಮಾರ್ ನಾಯ್ಕ್ ಎಂಬವರು ತನ್ನನ್ನು ನಿಯೋಜಿಸುವಂತೆ ಶಾಸಕರಲ್ಲಿ ವಿನಂತಿಸಿದ್ದರು. 18 ವರ್ಷಗಳಿಂದ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಅಶೋಕ್ ಕುಮಾರ್ ನಾಯ್ಕ್ ಎಂಬವರ ವಿನಂತಿಯ ಮೇರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತೆರವು ಆಗುವ ಸ್ಥಾನಕ್ಕೆ ಅವರನ್ನು ವರ್ಗಾಯಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ್ದರು.
ಶಾಸಕರ ಕೋರಿಕೆಯ ಮೇರೆಗೆ ಅಶೋಕ್ ಕುಮಾರ್ ನಾಯ್ಕ್ ಅವರನ್ನು ತಾತ್ಕಾಲಿಕ ನಿಯೋಜನೆಯಡಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು ವರ್ಗಾಯಿಸಿ ಆದೇಶಿಸಿದ್ದಾರೆ. ಜಿಪಂ ಸಿಎಸ್ ಅವರ ಆದೇಶದ ಮೇರೆಗೆ ಆ.21ರಂದು ಅಶೋಕ್ ಕುಮಾರ್ ನಾಯ್ಕ್ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆಗಸ್ಟ್ 23ರಂದು ಅಶೋಕ್ ಕುಮಾರ್ ನಾಯ್ಕರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಲ್ಲದೆ, ಅವರ ಸ್ಥಾನಕ್ಕೆ ಈ ಹಿಂದೆ ನಿವೃತ್ತಿ ಹೊಂದಿದ್ದ ಫ್ರಾನ್ಸಿಸ್ರನ್ನು ನಿಯಮಬಾಹಿರವಾಗಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಆರೋಪಿಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದ ನಳಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಶಾಸಕರಿಗೆ ಅವಮಾನ ಮಾಡಲಾಗಿದೆ, ಅವರ ಮನವಿಯನ್ನು ತಿರಸ್ಕರಿಸಿ ನಿವೃತ್ತ ಚಾಲಕನನ್ನು ನಿಯುಕ್ತಿಗೊಳಿಸಿರುವುದು ಸರಿಯಲ್ಲ. 21 ದಿನಗಳಲ್ಲಿ ಆತನ ಕೈಗೆ ವಾಹನವನ್ನು ಕೊಡಲಾಗಿದ್ದು, ಎಲ್ಲ ವಿಷಯಗಳ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಆಗಸ್ಟ್ 28ಕ್ಕೆ ವಿವರಣೆ ನೀಡಬೇಕು, ಇಲ್ಲವಾದಲ್ಲಿ 29ರಂದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.