ಕಾಸರಗೋಡು, ಮಾ 19 (DaijiworldNews/MS): 72 ಗಂಟೆಯಲ್ಲಿ ಪಡೆದಿರುವ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಕರ್ನಾಟಕ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗಿರುವ ಹಿನ್ನಲೆಯಲ್ಲಿ ಮಾ.19ರ ಶುಕ್ರವಾರ ಬೆಳಿಗ್ಗೆ ಕರ್ನಾಟಕ ಪೊಲೀಸರು ಮತ್ತು ಆರೋಗ್ಯ ಸಿಬಂಧಿಗಳು ವಾಹನಗಳನ್ನು ತಡೆದು ತಪಾಸಣೆ ಗೆ ಮುಂದಾಗಿದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ತಪಾಸಣೆ ಸ್ಥಗಿತಗೊಳಿಸಲಾಯಿತು.

ದ.ಕ ಜಿಲ್ಲೆಗೆ ಪ್ರವೇಶ ನಿರ್ಬಂಧ ಜಾರಿಗೆ ಬಂದಿರುವುದರಿಂದ ಗಡಿನಾಡ ಕಾಸರಗೋಡಿನ ವಿದ್ಯಾರ್ಥಿಗಳು, ಹಾಗೂ ಇತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಾಹನ ಹಾಗೂ ಬಸ್ಸುಗಳನ್ನು ತಡೆ ಹಿಡಿದ ಹಿನ್ನಲೆಯಲ್ಲಿ ನೂರಾರು ಪ್ರಯಾಣಿಕರು ಆತಂತ್ರಕ್ಕೆ ಸಿಲುಕಿದರು.
ಸ್ಥಳಕ್ಕೆ ತಲಪಿದ ಯು ಡಿ ಎಫ್ ಅಭ್ಯರ್ಥಿ ಎ. ಕೆ.ಎಂ ಅಶ್ರಫ್, ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ, ಲಕ್ಷ್ಮಣ , ಸಿದ್ದೀಕ್ ಮಂಜೇಶ್ವರ, ಮುಸ್ತಫಾ ಉದ್ಯಾವರ, ಬಿ. ಎ ಮನ್ಸೂರ್. ಮೊದಲಾದವರು ಪ್ರತಿಭಟನೆ ನೇತೃತ್ವ ನೀಡಿದರು. ತಿಂಗಳ ಹಿಂದೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ಬಳಿಕ ನಿರ್ಬಂಧ ಹಿಂತೆಗೆದುಕೊಳ್ಳಲಾಗಿತ್ತು.
ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಲೇರಿತ್ತು. ಆದರೆ ಮತ್ತೆ ಇದೀಗ ದ.ಕ ಜಿಲ್ಲೆಯಲ್ಲಿ ಉಲ್ಬಣಗೊಳ್ಳುತ್ತಿರುವ ಕೊರೊನಾ ಸೋಂಕಿನಿಂದ ಪ್ರವೇಶ ನಿರ್ಬಂಧ ಹೇರಲಾಗಿದ್ದು, ಇದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ.