ಬೆಳ್ತಂಗಡಿ, ಆ 24(SM): ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆಯೊಡ್ಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಪುದುವೆಟ್ಟು ಕೂಡುದಕಲಪು ನಿವಾಸಿ ಸಂತೋಷ್ ಕೆ.ಸಿ. ಧರ್ಮಸ್ಥಳ ಪೋಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ತಾಲೂಕಿನ ಪುದುವೆಟ್ಟು ನಡುವಿಂಜಾಲು ನಿವಾಸಿ ಫ್ರಾನ್ಸಿಸ್ ಎಂಬಾತ ನಮಗೆ ಕರೆ ಮಾಡಿ ನಮ್ಮ ಮಧ್ಯೆ ಸುಳ್ಳು ಆರೋಪಗಳನ್ನು ಹೊರಿಸುತ್ತ ನಮ್ಮದಾಂಪತ್ಯ ಜೀವನವನ್ನು ಸುಖವಾಗಿಡಲು ಬಿಡುವುದಿಲ್ಲ ಎಂದು ಬೆದರಿಸಿರುವುದಲ್ಲದೆ, ಕೊಲೆ ಮಾಡುವುದಾಗಿ ದರಿಕೆಯನ್ನು ಒಡ್ಡಿದ್ದಾನೆ ಎಂದು ಸಂತೋಷ್ ಕೆ.ಸಿ. ಆರೋಪಿಸಿದ್ದಾರೆ.
ದೂರವಾಣಿ ಮೂಲಕ ಈತ ಆಗಾಗ ಬೆದರಿಕೆ ಹಾಕುತ್ತಿದ್ದು ನಾವು ಮರುಪ್ರಶ್ನಿಸಿದಾಗ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಾನು ಕಳೆದ ೮ ವರ್ಷಗಳ ಹಿಂದೆ ರಾಧ ಎಂಬವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಫ್ರಾನ್ಸಿಸ್ ಎಂಬಾತ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸ್ ಠಾಣೆಗೆ ಸುಳ್ಳು ಮಾಹಿತಿ ನೀಡಿ ದೂರು ನೀಡಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೀಗ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇತ್ತೀಚೆಗೆ ಸ್ಥಳೀಯ ವಾರಪತ್ರಿಕೆಯೊಂದರಲ್ಲಿ ನನ್ನ ಹಾಗೂ ಪತ್ನಿಯ ಅನುಮತಿ ಇಲ್ಲದೆ ಪತ್ನಿಯ ಹುಟ್ಟುಹಬ್ಬದ ಶುಭಾಶಯವನ್ನು ಪ್ರಕಟಿಸಿದ್ದು ಇದರಿಂದ ನಮಗೆ ಅವಮಾನವಾಗಿದೆ. ಈತನ ವಿರುದ್ಧ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ.