ಮಂಗಳೂರು, ಆ 24(SM): ಈಗಾಗಲೇ ಕೊಡಗು ಜಿಲ್ಲೆಯನ್ನು ಅಕ್ಷರಶಃ ನಲುಗಿಸಿರುವ ಮಳೆರಾಯನ ಆರ್ಭಟ ಮತ್ತೆ ಶುರವಾಗಲಿದೆ. ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಆಗಸ್ಟ್ ೨೫ರಿಂದ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಧಾರಕಾರ ಮಳೆ ಸುರಿಯಲಿದೆ. ಜಿಲ್ಲೆಯ ಜನತೆ ಮತ್ತೆ ಎಚ್ಚರಿಕೆಯಿಂದ ಇರಬೇಕಾಗಿದೆ.
ಬಂಗಾಳಕೊಲ್ಲಿಯ ಒರಿಸ್ಸಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಿಂದಾಗಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದೆ. 30 ರಿಂದ 35 ಮಿ.ಮೀಟರ್ ವರೆಗೂ ಮಳೆಯಾಗುವ ಸಾಧ್ಯತೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದವಾರ ನಿರಂತರ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿತ್ತು. ಅಲ್ಲದೆ ದ.ಕ. ಜಿಲ್ಲೆಯ ಸುಳ್ಯ ತಾಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾನಿ ಸಂಭವಿಸಿತ್ತು. ಹಲವು ಮನೆಗಳು ಜಲಾವೃತಗೊಂಡರೆ, ಪ್ರಾಣ ಹಾನಿಯ ಪ್ರಕರಣಗಳೂ ಕೂಡ ದಾಖಲಾಗಿದ್ದವು. ಇದೀಗ ಮತ್ತೆ ಮಹಾ ಮಳೆಯ ಮುನ್ಸೂಚನೆ ಇದ್ದು ಜಿಲ್ಲೆಯ ಜನತೆ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚಿಸಿದ್ದಾರೆ.