ಮಂಗಳೂರು, ಮಾ. 19 (DaijiworldNews/SM): ನಗರದ ಬಂದರು ಠಾಣೆಯಲ್ಲಿ ೬೦ರ ಹರೆಯದ ಹೊನ್ನಮ್ಮ ಕಳೆದ ನಾಲ್ಕು ದಶಕಗಳಿಂದ ಆಶ್ರಯ ಪಡೆದುಕೊಂಡು ಬಂದಿದ್ದು, ಒಳ್ಳೆಯ ಕೆಲಸವನ್ನು ಹಿಂದಿನ ಅಧಿಕಾರಿಗಳು ಮಾಡಿದ್ದಾರೆ ಅನ್ನುವುದು ನಮ್ಮ ಹೆಮ್ಮೆ ಎಂಬುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಮಾಜದಲ್ಲಿ ಪೊಲೀಸರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಆದರೆ, ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಹಿಂದಿನ ಅಧಿಕಾರಿಗಳು ಯಾವುದೇ ಪ್ರಚಾರ ನಡೆಸದೆ ಇದನ್ನು ಮಾಡಿ ಮಾರ್ಗದರ್ಶಿಯಾಗಿದ್ದಾರೆ. ಪೊಲೀಸರ ಬಗ್ಗೆ ಅಲ್ಪ ಮಟ್ಟದ ಅಲೋಚನೆಗಳನ್ನು ಹೊಂದಿರುವವರಿಗೆ, ಪೊಲೀಸರಲ್ಲೂ ಮಾನವೀಯ ಹೃದಯವಿದೆ ಎಂಬುವುದಕ್ಕೆ ಈ ಕಾರ್ಯ ನಿದರ್ಶನವಾಗಲಿದೆ.
ಇನ್ನು ಹೊನ್ನಮ್ಮ ಕೆಲಸ ಮಾಡೋದಕ್ಕೆ ಗೌರವ ಧನ ನೀಡಲಾಗ್ತಾ ಇದೆ. ಹೊನ್ನಮ್ಮರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಮತ್ತು ಇತರ ಎಲ್ಲಾ ಖರ್ಚು ವೆಚ್ಚಗಳನ್ನು ಪೊಲೀಸರೇ ನೋಡಿಕೊಳ್ಳುತ್ತಿದ್ದಾರೆ ಎಂಬುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.