ಮಂಗಳೂರು, ಆ 25(SM): ಕಳೆದವಾರ ನಿರಂತರ ಮಳೆಯಾದ ಸಂದರ್ಭ ಜೋಡುಪಾಲ ಪ್ರಕೃತಿ ದುರಂತದಲ್ಲಿ ಗುಡ್ಡ ಕುಸಿತಗೊಂಡು ಜಲಸಮಾಧಿಯಾಗಿದ್ದ ಕುಟುಂಬವೊಂದರ ೪ ಜನರ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ನಿರಂತರ ಹುಡುಕಾಟದ ಬಳಿಕ ಆಗಸ್ಟ್ ೨೫ರ ಶುಕ್ರವಾರದಂದು ಗೌರಮ್ಮ ಎಂಬವರ ಮೃತದೇಹ ಪತ್ತೆಯಾಗಿದೆ. ಕಳೆದವಾರ ಭಾರೀ ಮಳೆಯ ಸಂದರ್ಭ ಗುಡ್ಡ ಕುಸಿತಗೊಂದು ಬಸಪ್ಪ ಎಂಬವರ ಮನೆ ಹಾಗೂ ಕುಟುಂಬಸ್ಥರು ಜಲಸಮಾಧಿಯಾಗಿದ್ದರು.
(ಎಡದಿಂದ ಬಲಕ್ಕೆ): ಬಸಪ್ಪ, ಮೋನಿಷಾ, ಮಂಜುಳಾ ಮತ್ತು ಗೌರಮ್ಮ
ಗುಡ್ಡದಿಂದ ಹರಿದು ಬಂದ ಜಲಪ್ರವಾಹಕ್ಕೆ ಮನೆ ಸೇರಿ ಅದರೊಳಗಿದ್ದ ೪ ಜನರು ಕೊಚ್ಚಿ ಹೋಗಿದ್ದರು. ದುರಂತ ನಡೆದ ಮರುದಿನವೇ ಬಲಿಯಾದ ಬಸಪ್ಪ ಮತ್ತು ಅವರ ಪುತ್ರಿ ಮೋನಿಷಾಳ ಶವ ಪತ್ತೆಯಾಗಿತ್ತು. ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರೆಸಲಾಗಿತ್ತು. ಗೌರಮ್ಮ ಅವರ ಮೃತದೇಹ ಸಿಕ್ಕಿದ್ದರಿಂದ ೪ ಜನರ ಪೈಕಿ ೩ ಮೃತದೇಹಗಳು ಪತ್ತೆಯಾಗಿದೆ. ಮತ್ತೊಬ್ಬ ಯುವತಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಗೃಹರಕ್ಷಕದಳದ ಸಿಬ್ಬಂದಿ ಜೊತೆ ಊರಿನವರು ಸೇರಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಬಸಪ್ಪ ಪತ್ನಿ ಗೌರಮ್ಮ ಶವಪತ್ತೆಯಾಗಿದೆ. ದೇವರಕೊಲ್ಲಿ ಸಮೀಪದ ಸೇತುವೆ ಬಳಿ ಮೃತದೇಹ ಪತ್ತೆಯಾಗಿದ್ದು ಜಲಪ್ರಳಯಕ್ಕೆ ಹರಿದು ಬಂದ ಮರಗಳ ನಡುವೆ ಸಿಕ್ಕಿಹಾಕಿತ್ತು ಎನ್ನಲಾಗಿದೆ. ದುರಂತದ ಸಂದರ್ಭ ಮನೆಯಲ್ಲಿದ್ದ ಗೌರಮ್ಮನವರ ಸಹೋದರನ ಪುತ್ರಿ ಮಂಜುಳಾ ಕೊಚ್ಚಿಹೋಗಿದ್ದು ಆಕೆಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ.