ಮಂಗಳೂರು, ಮಾ.20 (DaijiworldNews/MB) : ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕಾಗಿ ಕಪಿಲ ಗೋಶಾಲೆ ಮಾಲೀಕ ಪ್ರಕಾಶ್ ಶೆಟ್ಟಿಯವರಿಗೆ ಮಾಜಿ ಶಾಸಕ ಮೋಯ್ದಿನ್ ಬಾವಾ ಅವರು ಒಂದು ಲಕ್ಷ ರೂಪಾಯಿ ಚೆಕ್ನ್ನು ಹಸ್ತಾಂತರ ಮಾಡಿದರು.



ಮಾರ್ಚ್ 20 ರ ಶನಿವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋಯ್ದಿನ್ ಬಾವಾ, ''ಗೋವಿನ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಆಡಳಿತವೇ ಕಪಿಲ ಗೋಶಾಲೆಯನ್ನು ಕೆಡವಿದ್ದು ಈಗ ಗೋವುಗಳು ಸಂಕಷ್ಟದಲ್ಲಿವೆ. ಗೋ ಶಾಲೆ ಕೆಡವಿದ್ದರಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಬಿಜೆಪಿ ಸರ್ಕಾರ ಗೋ ಶಾಲೆ ಕೆಡವಿ ಬಳಿಕ ಆ ಗೋವುಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಶಾಸಕರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಗೋಶಾಲೆಯನ್ನು ನೆಲಸಮಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ಹೇಳಿದ್ದು, ''ಗೋ ಶಾಲೆಗಾಗಿ ಅರ್ಧ ಎಕರೆ ಜಮೀನು ನೀಡಬೇಕೆಂದು ನಾವು ಜಿಲ್ಲಾಧಿಕಾರಿ ಅವರಲ್ಲಿ ಒತ್ತಾಯಿಸುತ್ತೇವೆ. ಈ ವಿಷಯದಲ್ಲಿ ಶಾಸಕರು ಏನು ಮಾಡುತ್ತಿದ್ದಾರೆ ಹಾಗೂ ರಾಜ್ಯ ಸರ್ಕಾರ ಏನು ಮಾಡುತ್ತಿದೆ'' ಎಂದು ಪ್ರಶ್ನಿಸಿದರು.
''ಗೋ ಶಾಲೆ ಕೆಡವಿ 20 ದಿನಗಳು ಕಳೆದಿದ್ದರೂ ಜಿಲ್ಲಾಡಳಿತ ಇನ್ನೂ ಯಾವುದೇ ವ್ಯವಸ್ಥೆ ಮಾಡಿಲ್ಲ. ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕಾಗಿ ನಾನು ಕಪಿಲ ಗೋಶಾಲೆಗೆ ಒಂದು ಲಕ್ಷ ರೂ. ಹಸ್ತಾಂತರಿಸುತ್ತೇನೆ. ಕಪಿಲ ಗೋಶಾಲೆಗೆ ಸಹಾಯ ಮಾಡಲು ಸಹಕರಿಸಲು ನಾನು ಸದಾ ಸಿದ್ಧನಿದ್ದೇನೆ. ಈ ಗೋಶಾಲೆಗೆ 5 ಲಕ್ಷ ರೂ.ಗಳನ್ನು ನೀಡುವಂತೆ ನಾನು ಎಂಎಲ್ಸಿ ಅವರಲ್ಲಿಯೂ ವಿನಂತಿಸುತ್ತೇನೆ'' ಎಂದು ಹೇಳಿದರು.
ಕಪಿಲ ಗೋಶಾಲೆ ಮಾಲೀಕ ಪ್ರಕಾಶ್ ಶೆಟ್ಟಿ ಮಾತನಾಡಿ, ''ಗೋ ಶಾಲೆ ಕೆಡವಿದ ನಂತರ 300 ಹಸುಗಳನ್ನು ರಾತ್ರೋರಾತ್ರಿ ಸ್ಥಳಾಂತರಿಸುವುದು ತುಂಬಾ ಕಷ್ಟ. ಸರ್ಕಾರದ ಯಾವುದೇ ಹಣವನ್ನು ತೆಗೆದುಕೊಳ್ಳದೆ ನಾವು ಗೋವುಗಳನ್ನು ಸ್ವತಂತ್ಯ್ರವಾಗಿ, ಎಲ್ಲಾ ಸೌಲಭ್ಯವನ್ನು ಒದಗಿಸಿ ನೋಡಿಕೊಂಡಿದ್ದೇವೆ. ಭವಿಷ್ಯದ ಪೀಳಿಗೆಗೆ ಈ ಅಪರೂಪದ ತಳಿಯನ್ನು ಸಂರಕ್ಷಿಸುವ ಸಲುವಾಗಿ ನಾವು 8 ವರ್ಷಗಳಿಂದ ಈ ಗೋಶಾಲೆಯ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಸರ್ಕಾರ ಗೋವಿಗೆ ಅನ್ಯಾಯ ಮಾಡಿದೆ. ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಈ ಗೋವುಗಳನ್ನೇ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ನನ್ನ ಬಳಿ ಗೋ ಶಾಲೆ ನಿರ್ಮಾಣಕ್ಕೆ ನನ್ನದೇ ಆದ 2 ಎಕರೆ ಜಮೀನು ಇದೆ. ಗೋ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಶಾಶ್ವತ ಗೋ ಶಾಲೆ ನಿರ್ಮಾಣಕ್ಕಾಗಿ ರಾಮ ಸೇನೆ ಮುಂದೆ ಬಂದಿದೆ'' ಎಂದು ತಿಳಿಸಿದ್ದು, ''ಗೋ ಪೂಜೆಗೆ ಶಾಸಕ ವೇದವ್ಯಾಸ್, ಡಾ.ಭಾರತ್ ಶೆಟ್ಟಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕಪಿಲ ಗೋಶಾಲೆಗೆ ಭೇಟಿ ನೀಡಿದ್ದರು. ಆದರೆ ಗೋ ಶಾಲೆ ಕೆಡವಿದ ಬಳಿಕ ಇವರ್ಯಾರೂ ಭೇಟಿ ನೀಡಿಲ್ಲ'' ಎಂದು ದೂರಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪ್ರಕಾಶ್ ಶೆಟ್ಟಿ ಅವರನ್ನು ಕಟುಕ ಎಂದು ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ಶೆಟ್ಟಿ ಅವರು, ''ಭಟ್ ಅವರು ನಾನು ಗೋವುಗಳನ್ನು ಕಡಿಯಲು ನೀಡುತ್ತೇನೆ ಎಂದು ಗೋ ಕಡಿದವರಿಂದ ಮಾಹಿತಿ ಪಡೆದೆ ಎಂದು ಹೇಳಿದ್ದಾರೆ. ಅದರರ್ಥ ಅವರು ಗೋ ವಧೆ ಮಾಡುವವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬುದಾಗಿದೆ'' ಎಂದು ಟಾಂಗ್ ನೀಡಿದರು.
ಮುಸ್ಲಿಂ ಸಮುದಾಯ ಮಾತ್ರ ಗೋಮಾಂಸ ಸೇವಿಸುತ್ತಿದೆ. ಹಿಂದೂಗಳು ಗೋಮಾಂಸ ಸೇವಿಸುವುದಿಲ್ಲ ಎಂದು ಸಾಬೀತುಪಡಿಸುವಂತೆ ಮೋಯ್ದಿನ್ ಬಾವಾ ಭಟ್ಗೆ ಸವಾಲು ಹಾಕಿದರು. ''ಭಟ್ ಇದನ್ನು ಸಾಬೀತುಪಡಿಸಿದರೆ ನಾವು ಅವರ ಮಾತು ಕೇಳಲು ಸಿದ್ದ'' ಎಂದು ಹೇಳಿದರು.